ಚಿಕ್ಕಮಗಳೂರು: ನಿಫ್ಹಾ ವೈರಸ್ ಭೀತಿ; ಜನಾಕರ್ಷಣೆಯ ಕೇಂದ್ರದಲ್ಲೀಗ ನೀರವ ಮೌನ

ಚಿಕ್ಕಮಗಳೂರು, ಮೇ 24: ನಗರದ ಎಸ್ಪಿ ಕಚೇರಿ ಎದುರಿರುವ ನಗರಸಭೆ ಉದ್ಯಾನವನ ಈ ಹಿಂದೆ ಸಂಜೆಯಾಗುತ್ತಲೇ ಸಾರ್ವಜನಿಕರಿಂದ ತುಂಬಿ ತುಳುಕುತ್ತಿತ್ತು. ಎಳೆಯ ವಯಸ್ಸಿನ ಮಕ್ಕಳ ತುಂಟಾಟ, ಮಹಿಳೆಯರು, ಪುರುಷರು, ವೃದ್ಧರ ವಾಯುವಿಹಾರ ನಗರಸಭೆ ಉದ್ಯಾನದಲ್ಲಿ ಸಂಜೆಯ ಇಳಿ ಹೊತ್ತಿನಲ್ಲಿ ಸಾಮಾನ್ಯವಾಗಿತ್ತು. ಬೆಳಗಿನ ಹೊತ್ತಿನಲ್ಲಿ ಈ ಉದ್ಯಾನವನ ನಗರದ ನಾಗರಿಕರ ಪಾಲಿಗೆ ಮನಸ್ಸಿಗೆ ಮುದ ನೀಡುವ ನೆಚ್ಚಿನ ತಾಣವಾಗಿ ಪರಿಣಮಿಸಿತ್ತು. ಆದರೆ ಕಳೆದ ಒಂದು ವಾರದಿಂದ ಈ ಉದ್ಯಾನವನದಲ್ಲಿ ಸಾರ್ವಜನಿಕರ ವಾಯುವಿಹಾರ, ಮಕ್ಕಳ ಕಲರವ ಮಾಯವಾಗಿದ್ದು, ಬೆಳಗ್ಗೆ, ಸಾಯಂಕಾಲದ ಹೊತ್ತಿನಲ್ಲಿ ಜನರಿಂದ ತುಂಬಿ ತುಳುಕುತ್ತಿದ್ದ ಇಡೀ ಉದ್ಯಾನವನ ಬಿಕೋ ಅನ್ನುತ್ತಿದೆ. ಅಷ್ಟಕ್ಕೂ ನಗರಸಭೆ ಉದ್ಯಾನವನದ ಈ ನೀರವ ಮೌನಕ್ಕೆ ಕಾರಣವಾಗಿರುವುದು ಬಾವಲಿಗಳು!
ಹೌದು...ಚಿಕ್ಕಮಗಳೂರು ನಗರದ ನಗರಸಭೆ ಉದ್ಯಾನವನ ಸಾರ್ವಜನಿಕರ ಸ್ವಚ್ಛಂದ ವಿಹಾರಕ್ಕೆ ಮಾತ್ರವಲ್ಲದೇ ನೂರಾರು ವರ್ಷಗಳಿಂದ ಪಾರ್ಕ್‍ನ ಬೃಹತ್ ಮರಗಳಲ್ಲಿ ಬೀಡು ಬಿಟ್ಟಿರುವ ಅಪರೂಪದ ನಿಶಾಚರಿ ಬಾವಲಿಗಳ ಆಶ್ರಯತಾಣವಾಗಿರುವ ಕಾರಣಕ್ಕೂ ಈ ಉದ್ಯಾನವನ ಹೆಸರುವಾಸಿಯಾಗಿದೆ. ಇಲ್ಲಿನ ನಾಲ್ಕೈದು ಬೃಹತ್ ಹಳೆಯ ಮರಗಳಲ್ಲಿ ಸಾವಿರಾರು ಬಾವಲಿಗಳು ನೆಲೆ ಕಂಡು ಕೊಂಡಿವೆ. ಈ ಅಪರೂಪದ ನಿಶಾಚರಿ ಜೀವಿಗಳನ್ನು ನೋಡಲೆಂದೇ ಪುಟಾಣಿ ಮಕ್ಕಳಿಂದ ಹಿಡಿದು ವಯೋವೃದ್ಧರು ಇಲ್ಲಿಗೆ ಬಂದು ಮರದ ಟೊಂಗೆ ಟೊಂಗೆಗಳಲ್ಲಿ ತಲೆಕೆಳಗಾಗಿ ನೇತಾಡುವ ದೃಶ್ಯಗಳನ್ನು ಕಣ್ತುಂಬಿಕೊಳ್ಳುತ್ತಿದ್ದರು. ಮೊಬೈಲ್‍ಗಳಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಕಳೆದ ಒಂದು ವಾರಕ್ಕೂ ಮುನ್ನ ಈ ಉದ್ಯಾನವನದ ಬಾವಲಿಗಳು ನಗರದ ಸಾರ್ವಜನಿಕರ ಮನಸ್ಸಿಗೆ ಮುದ ನೀಡುತ್ತಿದ್ದುದು ಸುಳ್ಳಲ್ಲ.
ಆದರೆ ಕಳೆದ ಒಂದು ವಾರದಿಂದ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ನಿಫ್ಹಾ ವೈರಸ್ ಭೀತಿಯಿಂದಾಗಿ ಚಿಕ್ಕಮಗಳೂರು ನಗರದ ನಗರಸಭೆ ಉದ್ಯಾನವನ ಇಲ್ಲಿನ ಸಾರ್ವಜನಿಕರ ಪಾಲಿಗೆ ಅಕ್ಷರಶಃ ಭಯ ಹುಟ್ಟು ಹಾಕಿದೆ. ನಿಫ್ಹಾ ವೈರಸ್ ಬಾವಲಿಗಳಿಂದಾಗಿ ಎಲ್ಲೆಡೆ ಹರಡುತ್ತದೆ ಎಂಬ ಸುದ್ದಿಯಿಂದಾಗಿ ನಗರದ ಜನತೆ ನಗರಸಭೆ ಉದ್ಯಾನವನದತ್ತ ಮುಖ ಮಾಡುವುದನ್ನೇ ನಿಲ್ಲಿಸಿದ್ದಾರೆ. ಉದ್ಯಾನವನದ ಕೆಲ ಬೃಹತ್ ಮರಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿರುವ ಬಾವಲಿಗಳನ್ನು ಸದ್ಯ ನೋಡುವುದಿರಲಿ ನಗರಸಭೆ ಉದ್ಯಾನವನದ ಹೆಸರು ಕೇಳಿದರೂ ಒಮ್ಮೆ ಬೆಚ್ಚಿ ಬೀಳುವಷ್ಟರ ಮಟ್ಟಿಗೆ ನಿಫ್ಹಾ ವೈರಸ್ ಭೀತಿ ಜನರ ನಿದ್ದೆಗೆಡಿಸಿದೆ.
ನಗರಸಭೆ ಉದ್ಯಾನವನ ಮಾತ್ರವಲ್ಲದೇ ಅಲ್ಲೇ ಎದುರಿಗಿರುವ ಜಿಲ್ಲಾಧಿಕಾರಿ ನಿವಾಸದ ಎದುರಿನ ಬೃಹತ್ ಮರವೊಂದರಲ್ಲೂ ಸಾವಿರಾರು ಬಾವಲಿಗಳು ನೆಲೆಯೂರಿವೆ. ಈ ಬಾವಲಿಗಳು ಕಳೆದೊಂದು ಶತಮಾನದಿಂದಲ್ಲೂ ನಗರಸಭೆ ಉದ್ಯಾನ ಹಾಗೂ ಜಿಲ್ಲಾಧಿಕಾರಿ ನಿವಾಸದ ಎದುರಿನ ಮರಗಳಲ್ಲಿ ನೆಲೆ ಕಂಡು ಕೊಂಡಿವೆ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕೆ ಇಲ್ಲಿರುವ ಸಾವಿರಾರು ಬಾವಲಿಗಳ ತಂಟೆಗೆ ಯಾರೂ ಹೋಗುವುದಿಲ್ಲ. ಬದಲಾಗಿ ಈ ನಿಶಾಚರಿ ಜೀವಿಗಳ ಜೀವನ ಶೈಲಿಯನ್ನು ಸಾರ್ವಜನಿಕರು, ವಿಶೇಷವಾಗಿ ಮಕ್ಕಳು, ಯುವಕರು ಕತೂಹಲದಿಂದ ವೀಕ್ಷಿಸುತ್ತಾರೆ. ಹಗಲಿಡೀ ಇಲ್ಲಿನ ಮರಗಳ ರೆಂಬೆ ಕೊಂಬೆಗಳಲ್ಲಿ ತಲೆಕೆಳಗಾಗಿ ನೇತಾಡುವ ಬಾವಲಿಗಳು ರಾತ್ರಿಯಾಗುತ್ತಿದ್ದಂತೆ ಮರದಿಂದ ಮರಕ್ಕೆ ಹಾರಾಡುತ್ತವೆಯಾದರೂ ಬೆಳಗಾಗುತ್ತಲೇ ಮತ್ತೆ ಅದೇ ಮರಗಳಲ್ಲಿ ಠಿಕಾಣಿ ಹೂಡುತ್ತಿವೆ. ಈ ಬಾವಲಿಗಳು ಒಮ್ಮೆಯೂ ಇಲ್ಲಿಂದ ಬೇರೆಡೆಗೆ ತಮ್ಮ ನೆಲೆ ಬದಲಾಯಿಸಿದ ಉದಾಹರಣೆ ಇಲ್ಲ ಎಂದು ನಗರದ ಕೆಲ ಹಿರಿಯ ನಾಗರಿಕರು ಹೇಳುತ್ತಾರೆ.
ಹೀಗೆ ನಗರದ ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ಈ ಅಪರೂಪದ ಬಾವಲಿಗಳ ಗುಂಪೇ ಸದ್ಯ ಇಲ್ಲಿನ ಸಾರ್ವಜನಿಕರಲ್ಲಿನ ಭೀತಿಗೆ ಕಾರಣವಾಗಿದೆ. ಬಾವಲಿಗಳಿಂದ ಹರಡುವ ನಿಫಾಹ್ ವೈರಸ್‍ನಿಂದಾಗಿ ಚಿಕಿತ್ಸೆಯೇ ಇಲ್ಲದ ಖಾಯಿಲೆ ಎಲ್ಲೆಡೆ ಹರಡುತ್ತಿರುವ ಕಾರಣಕ್ಕೆ ನಗರಸಭೆ ಹಾಗೂ ಡಿಸಿ ನಿವಾಸದ ಎದುರಿನ ಮರಗಳಲ್ಲಿರುವ ಸಾವಿರಾರು ಬಾವಲಿಗಳಿಂದಾಗಿ ನಗರದಲ್ಲಿ ನಿಫ್ಹಾ ಸೋಂಕು ಹರಡಿದರೆ ಗತಿ ಏನೆಂಬ ಭೀತಿ ನಾಗರಿಕರನ್ನು ಕಾಡುತ್ತಿದೆ.
ನಿಫ್ಹಾ ವೈರಸ್ ಬಾವಲಿಗಳಿಂದ ಹರಡುತ್ತಿದೆ ಎಂಬ ಕಾರಣಕ್ಕೆ ಜಿಲ್ಲಾಡಳಿತವು ಈ ಬಗ್ಗೆ ಸೂಕ್ತ ಮುಂಜಾಗ್ರತಾ ಕ್ರಮ ವಹಿಸುವ ನಿಟ್ಟಿನಲ್ಲಿ ಕಾರ್ಯೋನ್ಮಖವಾಗುತ್ತಿದೆ ಎಂದು ತಿಳಿದು ಬಂದಿದ್ದು, ನಿಫ್ಹಾ ವೈರಸ್ ಹಿನ್ನೆಲೆಯಲ್ಲಿ ತಜ್ಞರ ಸಲಹೆ ಆಧರಿಸಿ ಜಿಲ್ಲಾಧಿಕಾರಿ ನಿವಾಸದ ಸುತ್ತಮುತ್ತಲಿನ ಮರದಲ್ಲಿರುವ ಬಾವಲಿಗಳ ಸ್ಥಳಾಂತರ ಅಥವಾ ನಿಯಂತ್ರಣದ ಬಗ್ಗೆ ಸಂಬಂಧಿಸಿದವರಲ್ಲಿ ಚರ್ಚಿಸುವುದಾಗಿ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದ್ದಾರೆ.
ನಿಫ್ಹಾ ಸೂಕ್ಷ್ಮಾಣುಗಳು ಬಾವಲಿಗಳ ಮೂಲಕ ಸೋಂಕನ್ನು ಹರಡುವ ಸಾಧ್ಯತೆಗಳಿವೆ. ಸಾಕಷ್ಟು ಪ್ರಮಾಣದಲ್ಲಿ ಬಾವಲಿಗಳು ಜಿಲ್ಲಾಧಿಕಾರಿ ನಿವಾಸದ ಸುತ್ತಲಲ್ಲಿರುವ ಮರಗಳಲ್ಲಿ ಆಶ್ರಯ ಪಡೆದಿವೆ. ಅವುಗಳಿಂದ ಈ ಸೋಂಕು ಹರಡುವುದನ್ನು ತಡೆಯುವುದು ಜಿಲ್ಲಾಡಳಿತದ ಜವಾಬ್ದಾರಿ. ಈಗಾಗಲೇ ಈ ವೈರಸ್ ಸೋಂಕು ಕೇರಳದಿಂದ ಮಂಗಳೂರಿಗೂ ಬಂದಿದೆ. ಆ ಹಿನ್ನೆಲೆಯಲ್ಲಿ ಜಿಲ್ಲೆಗೂ ಕಾಲಿಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹಾಗಾಗಿ ಬಾವಲಿ ಸಹ ಈ ಸೂಕ್ಷ್ಮಾಣುಗಳನ್ನು ಹೊತ್ತು ತರುವುದರಿಂದ ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿರುವ ಬಾವಲಿಗಳಿಂದ ಈ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ವಹಿಸಬೇಕಾಗಿದೆ. ನಗರಸಭೆ ಉದ್ಯಾನವನ, ಡಿಸಿ ನಿವಾಸ ಸೇರಿದಂತೆ ಸುತ್ತಮುತ್ತ ಇರುವ ಮರಗಳನ್ನು ಕಡಿದು ಹಾಕುವುದರಿಂದ ಈ ಬಾವಲಿಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಅವುಗಳನ್ನು ಹಿಡಿದು ಕೊಲ್ಲುವುದು ಸಾಕಷ್ಟು ಕಷ್ಟದ ಕೆಲಸ. ಹಾಗಾಗಿ ಯಾವ ರೀತಿ ಈ ಬಾವಲಿಗಳಿಂದ ನಿಫ್ಹಾ ವೈರಸ್ ಸೋಂಕು ಹರಡದಂತೆ ಕ್ರಮ ವಹಿಸಬಹುದೆಂದು ಸಲಹೆ ಸೂಚನೆ ನೀಡಲು ಜಿಲ್ಲಾ ವೈದ್ಯಾಧಿಕಾರಿಗೆ ತಿಳಿಸಿದ್ದು, ಈ ಸಂಬಂಧ ತಜ್ಞರ ಸಲಹೆ ಪಡೆಯಲು ಸೂಚಿಸಲಾಗಿದೆ.
- ಎಂ.ಕೆ.ಶ್ರೀರಂಗಯ್ಯ, ಡಿಸಿ







