ಹಣದ ಚೀಲ ತೋರಿಸಿದವರಿಗೆ ಬಿಜೆಪಿಯಲ್ಲಿ ಅವಕಾಶ: ಶಿವಸೇನೆ

ಮುಂಬೈ, ಮೇ 24: ತನ್ನ ಮಿತ್ರ ಪಕ್ಷವಾಗಿರುವ ಬಿಜೆಪಿ ವಿರುದ್ಧ ಗುರುವಾರ ವಾಗ್ದಾಳಿ ಮುಂದುವರಿಸಿರುವ ಶಿವಸೇನೆ ವರಿಷ್ಠ ಉದ್ಧವ್ ಠಾಕ್ರೆ, ಬಿಜೆಪಿಯಲ್ಲಿ ಯಾವುದೇ ಆದರ್ಶವೂ ಉಳಿದುಕೊಂಡಿಲ್ಲ ಎಂದಿದ್ದಾರೆ.
ಮೇ 28ರಂದು ನಡೆಯಲಿರುವ ಪಾಲ್ಘರ್ ಲೋಕಸಭಾ ಉಪ ಚುನಾವಣೆಯಲ್ಲಿ ಶಿವಸೇನೆ ಅಭ್ಯರ್ಥಿ ಶ್ರೀನಿವಾಸ್ ವಾನಗ ಅವರ ಪರವಾಗಿ ಮೊಖಾಡಾದಲ್ಲಿ ನಡೆದ ಪ್ರಚಾರ ರ್ಯಾಲಿಯಲ್ಲಿ ಠಾಕ್ರೆ ಮಾತನಾಡಿದರು.
ಕೇಸರಿ ಪಕ್ಷ ಕೇಸರಿಯಾಗಿ ಉಳಿದುಕೊಂಡಿಲ್ಲ ಎಂದು ಹೇಳಿದ ಅವರು, ಯಾರಲ್ಲಿ ಹಣ ಹಾಗೂ ಅಧಿಕಾರ ಇದೆಯೋ ಅವರು ಬಿಜೆಪಿ ಸೇರಬಹುದು ಎಂದರು. ತನ್ನ ಪಕ್ಷದ ಸದಸ್ಯರು ಅತಿ ಶ್ರೀಮಂತರಾಗಿದ್ದಾರೆ ಎಂಬ ಆರೋಪವನ್ನು ನಿರಾಕರಿಸಿರುವ ಠಾಕ್ರೆ, ಶಿವಸೇನೆ ಕಾರ್ಯಕರ್ತರು ಪ್ರಾಮಾಣಿಕರು ಎಂದಿದ್ದಾರೆ. ಚಿಂತಾಮನ್ ವಾನಗ ಅವರೊಂದಿಗೆ ಕೇಸರಿ ಧ್ವಜದ ಅಡಿಯಲ್ಲಿ ನೀವು ಕಾರ್ಯ ನಿರ್ವಹಿಸಿದ್ದೀರಿ. ಆದರೆ, ಅದು ಈಗ ಕೇಸರಿ ಪಕ್ಷವಾಗಿ ಉಳಿದುಕೊಂಡಿಲ್ಲ. ನೀವು ಹಣದ ಚೀಲ ತೋರಿಸಿದರೆ ಪ್ರವೇಶ ಸಿಗುತ್ತದೆ. ನನ್ನೊಂದಿಗೆ ಇರುವ ಜನರು ಪ್ರಾಮಾಣಿಕರು. ನಾವು ಹಣ ಪಡೆದು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಠಾಕ್ರೆ ಹೇಳಿದ್ದಾರೆ.
ಬಿಜೆಪಿ ಮಾಜಿ ಸಂಸದ ದಿವಂಗತ ಚಿಂತಾಮನ್ ವಾನಗ ಅವರ ಪುತ್ರ ಶ್ರೀನಿವಾಸ ವಾನಗ ಅವರಿಗೆ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಶಿವಸೇನೆ ಬಗ್ಗೆ ಅಸಮಾಧಾನಗೊಂಡಿದೆ. ಚಿಂತಾಮನ್ ವಾನಗ ಈ ವರ್ಷ ಮೃತಪಟ್ಟಿದ್ದರು. ಇದರಿಂದ ಸಮೀಪದ ಪಾಲ್ಗಾರ್ ಜಿಲ್ಲೆಯ ಲೋಕ ಸಭಾ ಸ್ಥಾನಕ್ಕೆ ಉಪ ಚುನಾವಣೆ ನಡೆಸಲು ನಿರ್ಧರಿಸಲಾಗಿತ್ತು. ಉಪ ಚುನಾವಣೆಯಲ್ಲಿ ವಾನಗ ಕುಟುಂಬದಿಂದ ಒಬ್ಬರನ್ನು ಕಣಕ್ಕಿಳಿಸಲು ಬಿಜೆಪಿ ಯೋಜಿಸುತ್ತಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಇತ್ತೀಚೆಗೆ ಹೇಳಿದ್ದರು. ಚಿಂತಾಮನ್ ವಾನಗ ಅವರ ನಿಧನದ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಉದ್ಧವ್ ಠಾಕ್ರೆ, ಅವರ ನಿಧನದಿಂದ ಪಾಲ್ಘಾರ್ ಸ್ಥಾನ ತೆರವಾಗಿರುವುದು ದುರಾದೃಷ್ಟಕರ. ಬಿಜೆಪಿ ಅವರ ಪುತ್ರ ಶ್ರೀನಿವಾಸ ಅವರಿಗೆ ಟಿಕೆಟ್ ನೀಡಿದ್ದರೆ, ನಾನೇ ಅವರ ಪರವಾಗಿ ಪ್ರಚಾರಕ್ಕೆ ಬರುತ್ತಿದ್ದೆ ಎಂದಿದ್ದಾರೆ.







