ಮಲೇಶ್ಯ ವಿಮಾನ ಉರುಳಿಸಿದ್ದು ರಶ್ಯದಿಂದ ಹಾರಿದ ಕ್ಷಿಪಣಿ: ತನಿಖಾ ತಂಡ ಘೋಷಣೆ

ಆ್ಯಮ್‌ಸ್ಟರ್‌ಡ್ಯಾಮ್ (ನೆದರ್‌ಲ್ಯಾಂಡ್ಸ್), ಮೇ 24: 2014ರಲ್ಲಿ ಮಲೇಶ್ಯ ಏರ್‌ಲೈನ್ಸ್‌ನ ಎಂಎಚ್17 ವಿಮಾನವನ್ನು ಪೂರ್ವ ಯುಕ್ರೇನ್‌ನ ಆಕಾಶದಲ್ಲಿ ಹೊಡೆದುರುಳಿಸಿದ ಕ್ಷಿಪಣಿಯು ರಶ್ಯನ್ ಸೇನಾ ಬ್ರಿಗೇಡ್‌ವೊಂದರಿಂದ ಹಾರಿತ್ತು ಎಂದು ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತಿರುವ ತನಿಖಾ ತಂಡವು ಗುರುವಾರ ಮೊದಲ ಬಾರಿಗೆ ಹೇಳಿದೆ.
‘‘ಎಂಎಚ್17 ವಿಮಾನವನ್ನು ಹೊಡೆದುರುಳಿಸಿದ ಬಿಯುಕೆ-ಟೆಲರ್ ಕ್ಷಿಪಣಿಯು ರಶ್ಯದ ಕರ್ಸ್ಕ್‌ನಲ್ಲಿರುವ 53ನೇ ವಿಮಾನ ನಿಗ್ರಹ ಕ್ಷಿಪಣಿ ಬ್ರಿಗೇಡ್‌ನಿಂದ ಹೊರಟಿತ್ತು ಎಂಬ ತೀರ್ಮಾನಕ್ಕೆ ಜಂಟಿ ತನಿಖಾ ತಂಡ ಬಂದಿದೆ’’ ಎಂದು ಪ್ರಮುಖ ಡಚ್ ತನಿಖಾ ಪರಿಣತ ವಿಲ್ಬರ್ಟ್ ಪೌಲಿಸನ್ ಹೇಳಿದರು.
‘‘53ನೇ ಬ್ರಿಗೇಡ್ ರಶ್ಯದ ಸಶಸ್ತ್ರ ಪಡೆಗಳ ಒಂದು ಭಾಗವಾಗಿದೆ’’ ಎಂದು ನೆದರ್‌ಲ್ಯಾಂಡ್ಸ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹೇಳಿದರು.
2014 ಜುಲೈ 17ರಂದು ಆ್ಯಮ್‌ಸ್ಟರ್‌ಡ್ಯಾಮ್‌ನಿಂದ ಕೌಲಾಲಂಪುರಕ್ಕೆ ಹಾರುತ್ತಿದ್ದ ಮಲೇಶ್ಯನ್ ಏರ್‌ಲೈನ್ಸ್ ವಿಮಾನವು ಸಂಘರ್ಷಪೀಡಿತ ಪೂರ್ವ ಯುಕ್ರೇನ್‌ನ ಆಕಾಶದಲ್ಲಿ ಪತನಗೊಂಡಿತ್ತು. ವಿಮಾನದಲ್ಲಿದ್ದ ಎಲ್ಲ 298 ಮಂದಿ ಮೃತಪಟ್ಟಿದ್ದಾರೆ.





