ಮೂಡಿಗೆರೆ: ಕಾಂಗ್ರೆಸ್, ಜೆಡಿಎಸ್, ಬಿಎಸ್ಪಿ ವತಿಯಿಂದ ವಿಜಯೋತ್ಸವ

ಮೂಡಿಗೆರೆ, ಮೇ 24: ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರಕಾರದಿಂದ ರಾಜ್ಯದ ಜನರಿಗೆ ಸಂಪೂರ್ಣವಾದ ಅತ್ಯುತ್ತಮ ಆಡಳಿತ ಮತ್ತು ಸಾಮಾಜಿಕ ನ್ಯಾಯ ಸಿಗಲಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಬಿ.ಎಸ್.ಜಯರಾಮ್ ಹೇಳಿದರು.
ಅವರು ಬುಧವಾರ ಮೈತ್ರಿ ಸರಕಾರದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಪದಗ್ರಹಣದ ಬಳಿಕ ಮೂಡಿಗೆರೆ ಪಟ್ಟಣದಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಎಸ್‍ಪಿ ವತಿಯಿಂದ ಆಯೋಜಿಸಿದ್ದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಳೆದ 5 ವರ್ಷದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ನೂರಾರು ಜನಪರ ಯೋಜನೆಯನ್ನು ಜಾರಿಗೊಳಿಸಿ, ಜನತೆಗೆ ಉತ್ತಮ ಆಡಳಿತ ನೀಡಿದೆ. ಅಲ್ಪಸಂಖ್ಯಾತರಿಗೆ ರಕ್ಷಣೆ, ರೈತರ 50 ಸಾವಿರ ಸಾಲ ಮನ್ನಾ, ಅನ್ನಭಾಗ್ಯ ಯೋಜನೆಯಲ್ಲಿ ಉಚಿತ ಅಕ್ಕಿ, ಇಂದಿರಾ ಕ್ಯಾಂಟೀನ್ ಸೇರಿದಂತೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪುವಂತಹ ಅತ್ಯುತ್ತಮ ಯೋಜನೆಗಳನ್ನು ಜಾರಿಗೊಳಿಸಿದ್ದರು. ಈಗ ಪುನಃ ಕಾಂಗ್ರೆಸ್ ಮತ್ತು ಜೆಡಿಎಸ್ ಅಧಿಕಾರಕ್ಕೆ ಬಂದಿರುವ ಕಾರಣ, ಮುಂದಿನ 5 ವರ್ಷದಲ್ಲಿ ರಾಜ್ಯದ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ಎಂದರು.
ಜೆಡಿಎಸ್ ಕ್ಷೇತ್ರದ ಸಮಿತಿ ಅಧ್ಯಕ್ಷ ಡಿ.ಜೆ.ಸುರೇಶ್ ಮಾತನಾಡಿ, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕೆಂಬ ರಾಜ್ಯದ ಜನತೆಯ ಕನಸು ನನಸಾಗಿದೆ. ಹಿಂದೆ 20 ತಿಂಗಳು ಮುಖ್ಯಮಂತ್ರಿಯಾಗಿದ್ದಾಗ, ಅವರ ಸರಕಾರ ಅತ್ಯುತ್ತಮವಾಗಿತ್ತು ಎಂದು ಜನರಿಂದ ಮೆಚ್ಚುಗೆ ಪಡೆದುಕೊಂಡಿದ್ದರು. ಈ ಬಾರಿ ರೈತರ ಸಂಪೂರ್ಣ ಸಾಲ ಮ್ನನಾ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಲಿದ್ದಾರೆಂದು ತಿಳಿಸಿದರು.
ಬಿಎಸ್‍ಪಿ ಮುಖಂಡ ಯು.ಬಿ.ಮಂಜಯ್ಯ ಮಾತನಾಡಿ, ಕೋಮುವಾದಿ ಬಿಜೆಪಿಯನ್ನು ಜನ ತಿರಸ್ಕರಿಸಿದ್ದಾರೆ. ಆದರೂ ಆ ಪಕ್ಷದ ಮುಖಂಡರು ತನ್ನ ಹಳೆಯ ಚಾಳಿಯನ್ನು ಮುಂದುವರೆಸಿದ್ದಾರೆ. 104 ಸ್ಥಾನ ಗಳಿಸಿದ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ನೀಡಲಾಗಿತ್ತಾದರೂ, ಬಹುಮತದ ಕೊರತೆಯಿಂದ ಅವರು ಮುಖ್ಯಮಂತ್ರಿಯಾಗಿ ಉಳಿದುಕೊಳ್ಳಲಿಲ್ಲ. ಬಹುಮತ ಇರುವ ಕಾಂಗ್ರಸ್, ಜೆಡಿಎಸ್,ಬಿಎಸ್‍ಪಿ ಮೈತ್ರಿಯಿಂದ ಸರಕಾರ ರಚಿಸಿದರೆ ಯಡಿಯೂರಪ್ಪ ಅವರು ಮೈ ಪರಚಿಕೊಳ್ಳುತ್ತಿದ್ದಾರೆ. ಅಪವಿತ್ರ ಮೈತ್ರಿಯೆಂದು ತಮ್ಮ ನಾಟಕ ಪ್ರದರ್ಶಿಸಿಕೊಳ್ಳುತ್ತಿದ್ದಾರೆ. ಬಿಜೆಪಿಯ ಸುಳ್ಳಿನ ಕಂತೆಗಳನ್ನು ರಾಜ್ಯದ ಜನ ನಂಬಿಕೊಳ್ಳಲು ಜನ ಕಿವಿಗೆ ಹೂವು ಮುಡಿದುಕೊಂಡಿಲ್ಲ ಎಂದು ಬಿಜೆಪಿಯವರು ತಿಳಿದುಕೊಳ್ಳಲಿ. ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್.ಕಾಂಗ್ರೆಸ್ ಮತ್ತು ಬಿಎಸ್‍ಪಿ ಸರಕಾರದಿಂದ ದೇಶದಲ್ಲಿ ಮತ್ತೊಂದು ಸಂಚಲನ ಸೃಷ್ಟಿಯಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ದೇಶದಲ್ಲಿ ತೃತೀಯರಂಗ ಅಧಿಕಾರಕ್ಕೆ ಬರಲಿದೆ. ನರೇಂದ್ರ ಮೋದಿ ಅವರನ್ನು ಮನೆಗೆ ಕಳಿಸುವ ಎಲ್ಲಾ ತಯಾರಿಯೂ ರಾಜ್ಯದಿಂದಲೇ ಆರಂಭವಾಗಲಿದೆ ಎಂದು ತಿಳಿಸಿದರು.
ಆರಂಭದಲ್ಲಿ ವಾಧ್ಯದೊಂದಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿ, ಪಟಾಕಿ ಸಿಡಿಸಿ, ಹರ್ಷೋದ್ಗಾರ ವ್ಯಕ್ತಪಡಿಸಲಾಯಿತು.
ಕಾಂಗ್ರೆಸ್ ವಕ್ತಾರ ಎಂ.ಎಸ್.ಅನಂತ್, ಮುಖಂಡರಾದ ಜಯಮ್ಮ, ಹೊಸಕೆರೆ ರಮೇಶ್, ಬಿ.ಡಿ.ಸುಬ್ಬುಯ್ಯ, ಜೆಡಿಎಸ್ ಮುಖಂಡರಾದ ಡಿ.ಆರ್.ಉಮಾಪತಿ, ಬಿ.ಎಲ್.ಲೋಹಿತ್, ಕಣಚೂರು ರಾಜೇಂದ್ರ, ಬಿ.ಎಸ್.ಅಜಿತ್ ಕುಮಾರ್, ಬಿಎಸ್ಪಿ ಮುಖಂಡರಾದ ಬಿ.ಎಂ.ಶಂಕರ್, ಲೋಕವಳ್ಳಿ ರಮೇಶ್, ಪಿ.ಕೆ.ಮಂಜುನಾಥ್, ಮರಗುಂದ ಪ್ರಸನ್ನ, ಬಕ್ಕಿ ಮಂಜುನಾಥ್ ಮತ್ತಿತರರಿದ್ದರು.







