28 ಕೋ.ರೂ. ಜಿಎಸ್‌ಟಿ ತೆರಿಗೆ ತಪ್ಪಿಸಿದ ಪ್ರಕರಣ: ತಂದೆ-ಮಗನ ಬಂಧನ

ಹೊಸದಿಲ್ಲಿ, ಮೇ 24: 28 ಕೋಟಿ ರೂ. ಜಿಎಸ್‌ಟಿ ತೆರಿಗೆ ತಪ್ಪಿಸಿದ ಪ್ರಕರಣಕ್ಕೆ ಸಂಬಂಧಿಸಿ ತಂದೆ-ಮಗನನ್ನು ಜಿಎಸ್‌ಟಿ ಅಧಿಕಾರಿಗಳು ಬಂಧಿಸಿದ್ದು, ನೂತನ ತೆರಿಗೆ ವ್ಯವಸ್ಥೆ ಜಾರಿಗೆ ಬಂದ ಬಳಿಕ ಆಗಿರುವ ಮೊತ್ತಮೊದಲ ಬಂಧನ ಇದಾಗಿದೆ. ತಾಮ್ರದ ಉದ್ಯಮಕ್ಕೆ ಸಂಬಂಧಿಸಿ ಅಕ್ರಮವಾಗಿ ಕ್ರೆಡಿಟ್ ಬಿಲ್ ನೀಡುವ ಮೂಲಕ ಸುಮಾರು 28 ಕೋಟಿ ರೂ. ಮೊತ್ತದ ಜಿಎಸ್‌ಟಿ ತೆರಿಗೆ ತಪ್ಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧೆಡೆ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ದೋಷಾರೋಪಣೆಗೆ ಪೂರಕವಾದ ದಾಖಲೆಪತ್ರಗಳು ಹಾಗೂ ಪುರಾವೆಗಳು ಲಭ್ಯವಾಗಿವೆ. ಈ ಪ್ರಕರಣದಲ್ಲಿ ಇಬ್ಬರ ಪಾತ್ರವಿರುವುದು ತನಿಖೆಯಿಂದ ತಿಳಿದು ಬಂದಿದೆ. ಇವರಿಬ್ಬರನ್ನು ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 69(1)ರಡಿ ಬಂಧಿಸಲಾಗಿದ್ದು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸರಕು ಪೂರೈಕೆ ಮಾಡದೆ ಬಿಲ್ ನೀಡಿರುವ ಹಾಗೂ 'ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್' ವ್ಯವಸ್ಥೆಯನ್ನು ಕಾನೂನುಬಾಹಿರವಾಗಿ ಬಳಸಿಕೊಂಡಿರುವ ಕ್ರಮವು (5 ಕೋಟಿ ರೂ. ಮೊತ್ತಕ್ಕಿಂತ ಹೆಚ್ಚಿನ ವ್ಯವಹಾರವಾಗಿದ್ದರೆ) ದಸ್ತಗಿರಿ ಮಾಡಬಹುದಾದ ಅಪರಾಧವಾಗಿದೆ. ಈ ವ್ಯವಹಾರದಲ್ಲಿ ಇನ್ನಷ್ಟು ನಕಲಿ ಸಂಸ್ಥೆಗಳು ಒಳಗೊಂಡಿರುವ ಹಾಗೂ ತೆರಿಗೆ ತಪ್ಪಿಸಿದ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದ್ದು ಹೆಚ್ಚಿನ ತನಿಖೆಯ ಬಳಿಕ ಈ ಬಗ್ಗೆ ಸ್ಪಷ್ಟ ಚಿತ್ರಣ ದೊರಕಲಿದೆ ಎಂದು ಪ್ರಕಟಣೆ ತಿಳಿಸಿದೆ.





