ಚಿಕ್ಕಮಗಳೂರು: ಪತ್ನಿಯಿಂದ ಪತಿಯ ಹತ್ಯೆ; ಆರೋಪ

ಚಿಕ್ಕಮಗಳೂರು, ಮೇ 24: ತಾಲೂಕಿನ ಸಖರಾಯಪಟ್ಟಣ ಸಮೀಪದ ಭೈರಪ್ಪನಹಳ್ಳಿ ಗ್ರಾಮದಲ್ಲಿ ರಮೇಶ್ ಎಂಬಾತ ಸಂಶಯಾಸ್ಪದವಾಗಿ ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮದ ರಮೇಶ್ ಎಂಬಾತ ತನ್ನ ಪತ್ನಿ ಪುಷ್ಪಾಂಜಲಿ ಮತ್ತು ಪತ್ನಿಯ ಪೋಷಕರೊಡನೆ ಕಳೆದ ಒಂದೂವರೆ ತಿಂಗಳ ಹಿಂದೆ ಚಿಕ್ಕಮಗಳೂರಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಈ ಸಂದರ್ಭ ಪತ್ನಿ ಪುಷ್ಪಾಂಜಲಿಗೆ ಶಿವಕುಮಾರ ಎಂಬ ಯುವಕನ ಸ್ನೇಹವಿತ್ತು ಎಂದು ಹೇಳಲಾಗಿದೆ. ಈ ಅನುಮಾನದ ಕುರಿತು ರಮೇಶ್ ಮತ್ತು ಪುಷ್ಪಾಂಜಲಿಯ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು, ಈ ಮನಸ್ತಾಪದಿಂದ ಚಿಕ್ಕಮಗಳೂರಿನ ಬಾಡಿಗೆ ಮನೆ ಬಿಟ್ಟು ಬೈರಪ್ಪನಹಳ್ಳಿ ಗ್ರಾಮಕ್ಕೆ ಬಂದರೂ ಪುಷ್ಪಾಂಜಲಿ ತನ್ನ ಅನೈತಿಕ ಸಂಬಂಧ ಮುಂದುವರಿಸಿದ್ದಳು ಎನ್ನಲಾಗಿದ್ದು, ಇದರಿಂದ ಗಂಡ ಹೆಂಡತಿ ನಡುವೆ ನಿರಂತರ ಜಗಳವಾಗುತ್ತಿತ್ತು ಎಂದು ತಿಳಿದು ಬಂದಿದೆ.
ಕಳೆದ ಮೇ.20ರಂದು ರವಿವಾರ ರಾತ್ರಿ ಮದ್ಯ ಸೇವಿಸಿದ್ದ ಪತಿ ರಮೇಶ್ ಮನೆಯಲ್ಲಿ ಮಲಗಿದ್ದವನು ಬೆಳಗ್ಗೆ ಮೃತಪಟ್ಟಿದ್ದ. ಮೃತ ದೇಹದ ಕುತ್ತಿಗೆ ಭಾಗ ಕಪ್ಪಾಗಿದ್ದು, ಈ ಸಾವು ಸಂಶಯಾಸ್ಪದವಾಗಿದ್ದು, ರಮೇಶನ ಪತ್ನಿಯೇ ಕೊಲೆ ಮಾಡಿದ್ದಾಳೆ ಎಂಬ ಅನುಮಾನದಿಂದ ಮೃತನ ಸಹೋದರ ಶಿವಮೂರ್ತಿ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





