ಮಂಡ್ಯ: ತಮಿಳುನಾಡು ಗೋಲಿಬಾರ್ ಖಂಡಿಸಿ ರೈತರಿಂದ ರಸ್ತೆತಡೆ

ಮಂಡ್ಯ, ಮೇ 24: ತಮಿಳುನಾಡಿನ ತೂತುಕುಡಿಯಲ್ಲಿ ಸ್ಟರ್‍ಲೈಟ್ ತಾಮ್ರ ಸಂಸ್ಕರಣ ಘಟಕದ ವಿರುದ್ಧ ಚಳವಳಿನಿರತ ರೈತರ ಮೇಲೆ ತಮಿಳುನಾಡು ಸರಕಾರ ಗೋಲಿಬಾರ್ ನಡೆಸಿರುವ ಕೃತ್ಯ ಖಂಡಿಸಿ ರೈತಸಂಘದ ಕಾರ್ಯಕರ್ತರು ಮಂಡ್ಯ ಮತ್ತು ಪಾಂಡವಪುರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಕಾವೇರಿ ವನದ ಎದುರು ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ರಸ್ತೆತಡೆ ನಡೆಸಿದ ಪ್ರತಿಭಟನಾಕಾರರು, ತಮಿಳುನಾಡು ಸರಕಾರ ಮತ್ತು ಅಲ್ಲಿನ ಪೊಲೀಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ತಾಮ್ರ ಘಟಕ ವಿರೋಧಿಸಿ ಶಾಂತಿಯುತ ಹೋರಾಟ ನಡೆಸುತ್ತಿದ್ದ ರೈತರ ಮೇಲೆ ಗೋಲಿಬಾರ್ ಮಾಡಿ ಹತ್ಯೆ ಮಾಡಲಾಗಿದ್ದು, ಇದಕ್ಕೆ ತಮಿಳುನಾಡು ಸರಕಾರ ಹೊಣೆಯಾಗಿದೆ ಎಂದು ಅವರು ಕಿಡಿಕಾರಿದರು.
ಅಲ್ಲಿನ ಜಿಲ್ಲ ಕಲೆಕ್ಟರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಿ ಕ್ರಮಕೈಗೊಳ್ಳಬೇಕು. ಮೃತ ರೈತರ ಕುಟುಂಬಗಳಿಗೆ ಪರಿಹಾರ ನೀಡಬೇಕು. ಪರಿಸರ ಮತ್ತು ಕೃಷಿಗೆ ಮಾರಕವಾಗಿರುವ ತಾಮ್ರ ಮಿಶ್ರಣ ಘಟಕ ಮುಚ್ಚಬೇಕು ಎಂದು ಅವರು ಒತ್ತಾಯಿಸಿದರು.
ಇದೇ ವೇಳೆ ಚುನಾವಣೆಗೆ ಮುನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೈತರ ಎಲ್ಲಾ ಸಾಲಮನ್ನಾ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಸಂಘದ ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್, ಪ್ರಧಾನ ಕಾರ್ಯದರ್ಶಿ ಬಿ.ಬೊಮ್ಮೇಗೌಡ, ಕೀಲಾರ ಸೋಮಶೇಖರ್, ಲಿಂಗಪ್ಪಾಜಿ, ಲತಾ ಶಂಕರ್, ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಮು ಇತರ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪಾಂಡವಪುರ ವರದಿ: ತಾಲೂಕು ರೈತಸಂಘದ ವತಿಯಿಂದ ಪಟ್ಟಣದ ಐದು ದೀಪದ ವೃತ್ತದಲ್ಲಿ ಸುಮಾರು ಅರ್ಧ ತಾಸು ಶ್ರೀರಂಗಪಟ್ಟಣ-ಬೀದರ್ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ರೈತರು, ತಮಿಳುನಾಡು ಸರಕಾರ ಹಾಗೂ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎ.ಎಲ್.ಕೆಂಪೂಗೌಡ ಮಾತನಾಡಿ, ಗೋಲಿಬಾರ್ ನಿಂದ ಹತ್ಯೆಗೊಳಗಾದ ರೈತರ ಕುಟುಂಬಗಳಿಗೆ ತಮಿಳುನಾಡು ಸರಕಾರ ಘೋಷಿಸಿರುವ 10 ಲಕ್ಷ ರೂ. ಪರಿಹಾರ ಯಾವುದಕ್ಕೂ ಸಾಲದಾಗಿದೆ. ಗರಿಷ್ಠ 50 ಲಕ್ಷ ರೂ. ಪರಿಹಾರ ವಿತರಿಸುವ ಜತೆಗೆ ಅವರ ಕುಟುಂಬದಲ್ಲಿ ಒಬ್ಬರಿಗೆ ಸರಕಾರಿ ಕೆಲಸ ನೀಡಬೇಕು ಎಂದು ಆಗ್ರಹಿಸಿದರು.
ಅಕ್ಷತಾ ಪುಟ್ಟಣ್ಣಯ್ಯ ಮಾತನಾಡಿ, ಜಿಪಂ ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ಮುಖಂಡರಾದ ಸ್ಮಿತಾ ಪುಟ್ಟಣ್ಣಯ್ಯ, ಕೆ.ಎಸ್.ವಿಶ್ವನಾಥ್, ಕೆನ್ನಾಳು ನಾಗರಾಜು, ಜೈಗುರುದೇವ್ (ಜಯರಾಮಣ್ಣ), ಮೊದಲಿಯರ್ ವೆಂಕಟೇಶ್, ಸತೀಶ್, ಸಿ.ಕೆ.ಪುಟ್ಟೇಗೌಡ, ಅಮೃತಿ ರಾಜಶೇಖರ್, ಯುವ ಮುಖಂಡರಾದ ಮಂಜುನಾಥ್, ಎಣ್ಣೆಹೊಳೆಕೊಪ್ಪಲು ರಘು, ಚಂದ್ರೆ ಮಂಜು ಇತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.







