ಶಿಕ್ಷಣ ಸಂಸ್ಥೆಗಳಲ್ಲಿ ಆನ್‌ಲೈನ್ ಕೋರ್ಸ್:ಯುಜಿಸಿ ಒಪ್ಪಿಗೆ
ಹೊಸದಿಲ್ಲಿ,ಮೇ 24: ಆನ್‌ಲೈನ್‌ನಲ್ಲಿ ಪದವಿ,ಸ್ನಾತಕೋತ್ತರ ಮತ್ತು ಡಿಪ್ಲೋಮಾ ಕೋರ್ಸ್‌ಗಳನ್ನು ಆರಂಭಿಸಲು ಶಿಕ್ಷಣ ಸಂಸ್ಥೆಗಳಿಗೆ ಅವಕಾಶ ಕಲ್ಪಿಸುವ ನಿಬಂಧನೆಗಳಿಗೆ ವಿಶ್ವವಿದ್ಯಾನಿಲಯ ಅನುದಾನ ಆಯೋಗ(ಯುಜಿಸಿ)ವು ಬುಧವಾರ ಒಪ್ಪಿಗೆ ನೀಡಿದ್ದು,ಇದೊಂದು ಪ್ರಮುಖ ಸುಧಾರಣೆಯಾಗಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ ಜಾವಡೇಕರ್ ಅವರು ಪ್ರಶಂಸಿಸಿದ್ದಾರೆ.
ಆದರೆ ವಿವಿಗಳು ನಿರ್ದಿಷ್ಟ ವಿಭಾಗದಲ್ಲಿ ಈಗಾಗಲೇ ನಿಯಮಿತ ಕೋರ್ಸ್‌ಗಳನ್ನು ನಡೆಸುತ್ತಿದ್ದರೆ ಮಾತ್ರ ಅದರ ಆನ್‌ಲೈನ್ ಕೋರ್ಸ್‌ನ್ನು ಆರಂಭಿಸಬಹುದಾಗಿದೆ ಎಂದ ಅವರು,ಇದರಿಂದ ಭಾರತದ ಹೊರಗಿನ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಭಾರತೀಯ ವಿವಿಗಳಲ್ಲಿ ವ್ಯಾಸಂಗ ಮಾಡಬಹುದಾಗಿದೆ ಎಂದರು.
ಆನ್‌ಲೈನ್ ಕೋರ್ಸ್ ಆರಂಭಿಸಲು ಬಯಸುವ ಶಿಕ್ಷಣ ಸಂಸ್ಥೆಗಳು ಕನಿಷ್ಠ ಐದು ವರ್ಷಗಳಿಂದ ಅಸ್ತಿತ್ವದಲ್ಲಿರಬೇಕು ಮತ್ತು ನ್ಯಾಕ್ ಮಾನ್ಯತೆಯನ್ನು ಹೊಂದಿರಬೇಕು. ಇಂಜಿನಿಯರಿಂಗ್ ,ವ್ಯೆದ್ಯಕೀಯ, ದಂತ ವೈದ್ಯಕೀಯ, ಫಾರ್ಮಸಿ, ನರ್ಸಿಂಗ್, ಆರ್ಕಿಟೆಕ್ಚರ್ ಮತ್ತು ಫಿಜಿಯೊಥೆರಪಿ ವಿಭಾಗಗಳಲ್ಲಿ ಆನ್‌ಲೈನ್ ಕೋರ್ಸ್‌ಗಳಿಗೆ ಅವಕಾಶವಿರುವುದಿಲ್ಲ.





