ಗುಂಡಿನ ದಾಳಿಯಲ್ಲಿ ಮಗು ಮೃತಪಟ್ಟ ಪ್ರಕರಣ : ಪಾಕ್ ರಾಯಭಾರಿಗೆ ಪ್ರತಿಭಟನೆ ಸಲ್ಲಿಸಿದ ಭಾರತ

ಹೊಸದಿಲ್ಲಿ, ಮೇ 24: ಜಮ್ಮು ಮತ್ತು ಕಾಶ್ಮೀರದ ಭಿಂಬರ್ ವಲಯದಲ್ಲಿ ಕದನವಿರಾಮ ಉಲ್ಲಂಘಿಸಿ ಪಾಕ್ ಪಡೆಗಳು ಸೋಮವಾರ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಎಂಟು ತಿಂಗಳ ಮಗು ಮೃತಪಟ್ಟ ಘಟನೆಗೆ ಸಂಬಂಧಿಸಿ ಭಾರತವು ಪಾಕಿಸ್ತಾನದ ಉಪ ಹೈಕಮಿಷನರ್ ಸೈಯದ್ ಹೈದರ್ ಶಾರನ್ನು ಕರೆಸಿಕೊಂಡು ತೀವ್ರ ಪ್ರತಿಭಟನೆ ಸಲ್ಲಿಸಿದೆ.
ಪಾಕ್ ಪಡೆಗಳು ಉದ್ದೇಶಪೂರ್ವಕವಾಗಿ ಮುಗ್ಧ ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ದಾಳಿ ಶೋಚನೀಯವಾಗಿದೆ ಎಂದು ಪಾಕ್ ಉಪಕಮಿಷನರ್‌ಗೆ ತಿಳಿಸಿರುವುದಾಗಿ ವಿದೇಶ ವ್ಯವಹಾರ ಸಚಿವಾಲಯ ತಿಳಿಸಿದೆ. ಅಮಾಯಕ ನಾಗರಿಕರ ಹತ್ಯೆಯಾಗುತ್ತಿರುವ ಇಂತಹ ಹೇಯ ಕೃತ್ಯಗಳ ಕುರಿತು ತನಿಖೆ ನಡೆಸುವಂತೆ ಹಾಗೂ ತಕ್ಷಣ ಈ ರೀತಿಯ ಕೃತ್ಯ ನಡೆಸದಂತೆ ಸೇನಾಪಡೆಗೆ ಸೂಚಿಸಬೇಕೆಂದು ಪಾಕಿಸ್ತಾನದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ ಗಡಿ ನಿಯಂತ್ರಣಾ ರೇಖೆಯುದ್ದಕ್ಕೂ ಹಾಗೂ ಅಂತರಾಷ್ಟ್ರೀಯ ಗಡಿಭಾಗದಲ್ಲಿ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಯುತ್ತಿರುವ ಬಗ್ಗೆ ಭಾರತ ಸರಕಾರದ ಆತಂಕವನ್ನು ತಿಳಿಸಲಾಗಿದೆ. 2018ರಲ್ಲಿ ಪಾಕ್ ಪಡೆಗಳಿಂದ ಗಡಿ ಉಲ್ಲಂಘನೆ ಹಾಗೂ ಅಪ್ರಚೋದಿತ ಗುಂಡಿನ ದಾಳಿಯ 1,088 ಪ್ರಕರಣ ನಡೆದಿದ್ದು ಇದರಲ್ಲಿ 36 ಮಂದಿ ಸಾವನ್ನಪ್ಪಿದ್ದು 127 ಜನ ಗಾಯಗೊಂಡಿದ್ದಾರೆ ಎಂದು ವಿದೇಶ ವ್ಯವಹಾರ ಇಲಾಖೆಯ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅಲ್ಲದೆ ಗಡಿಯಾಚೆಗಿಂದ ಭಯೋತ್ಪಾದಕರು ಒಳನುಸುಳಲು ಪಾಕ್ ಪಡೆಗಳು ನೀಡುತ್ತಿರುವ ಬೆಂಬಲವನ್ನು ಕೊನೆಗೊಳಿಸುವಂತೆ ಪಾಕ್ ಅಧಿಕಾರಿಗಳಿಗೆ ತಿಳಿಸಲಾಗಿದೆ. 2018ರಲ್ಲಿ ಭಯೋತ್ಪಾದಕರು ಗಡಿಯಾಚೆಗಿಂದ ಒಳನುಸುಳಲು ನಡೆಸಿದ 53 ಪ್ರಯತ್ನಗಳನ್ನು ವಿಫಲಗೊಳಿಸಲಾಗಿದೆ ಹಾಗೂ ಐವರು ಭಯೋತ್ಪಾದಕರು ಗಡಿನಿಯಂತ್ರಣಾ ರೇಖೆ ದಾಟಿ ಒಳಬರುವ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.





