ನೀರವ್ ಮೋದಿ, ಸಹಚರರ ವಿರುದ್ಧ ಆರೋಪಪಟ್ಟಿ ದಾಖಲು

ಮುಂಬೈ, ಮೇ 24: ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ಹಾಗೂ ಆತನ ಸಹಚರರು ಒಳಗೊಂಡಿರುವ ಪಿಎನ್‌ಬಿ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇಡಿ) ಪ್ರಥಮ ಆರೋಪಪಟ್ಟಿ ದಾಖಲಿಸಿದೆ.
ಹಣ ಅಕ್ರಮ ಸಾಗಣೆ ತಡೆ ಕಾಯ್ದೆಯ ವಿವಿಧ ಪರಿಚ್ಛೇದದಡಿ ವಿಶೇಷ ನ್ಯಾಯಾಲಯದಲ್ಲಿ 12,000 ಪುಟಗಳ ಆರೋಪಪಟ್ಟಿ ದಾಖಲಿಸಲಾಗಿದೆ. ನೀರವ್ ಮೋದಿಯ ಚಿಕ್ಕಪ್ಪ ಹಾಗೂ ಆಭರಣ ವ್ಯಾಪಾರಿ ಮೆಹುಲ್ ಚೋಕ್ಸಿ ವಿರುದ್ಧ ಎರಡನೇ ಆರೋಪಪಟ್ಟಿ ದಾಖಲಿಸುವ ನಿರೀಕ್ಷೆಯಿದೆ. ಸಿಬಿಐ ಫೆ.14ರಂದು ಪ್ರಥಮ ಆರೋಪಪಟ್ಟಿ ದಾಖಲಿಸಿದ ಬಳಿಕ ಮೋದಿ ಹಾಗೂ ಆತನ ಸಹಚರರಿಗೆ ಸೇರಿರುವ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿರುವ ಬಗ್ಗೆ ಆರೋಪಪಟ್ಟಿಯಲ್ಲಿ ಮಾಹಿತಿ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಈ ತಿಂಗಳ ಆರಂಭದಲ್ಲಿ ಸಿಬಿಐ ಎರಡು ಆರೋಪಪಟ್ಟಿ ದಾಖಲಿಸಿದೆ.
ನೀರವ್ ಮೋದಿ ಹಾಗೂ ಆತನ ಸಹಚರರು ಬ್ಯಾಂಕಿನ ಕೆಲವು ಸಿಬ್ಬಂದಿಗಳ ಸಹಕಾರದಿಂದ ಬ್ಯಾಂಕ್‌ಗೆ 13,000 ರೂ. ವಂಚನೆ ಎಸಗಿದ್ದಾರೆ ಎಂದು ಪಿಎನ್‌ಬಿ (ಪಂಜಾಬ್ ನ್ಯಾಷನಲ್ ಬ್ಯಾಂಕ್) ನೀಡಿದ ದೂರಿನ ಬಳಿಕ ಈ ಬೃಹತ್ ಪ್ರಮಾಣದ ವಂಚನೆ ಪ್ರಕರಣ ಬೆಳಕಿಗೆ ಬಂದಿತ್ತು. ಬಳಿಕ ಮೋದಿ ಹಾಗೂ ಇತರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಆದರೆ ವಿದೇಶಕ್ಕೆ ಪರಾರಿಯಾಗಿರುವ ಮೋದಿ ಜಾರಿ ನಿರ್ದೇಶನಾಲಯದ ತನಿಖೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಇವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗುವ ಮೊದಲೇ ಮೋದಿ ಹಾಗೂ ಇತರರು ಭಾರತದಿಂದ ಪಲಾಯನ ಮಾಡಿದ್ದಾರೆ ಎನ್ನಲಾಗುತ್ತಿದೆ.







