ಚಿಕ್ಕಮಗಳೂರು; ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಆಯನೂರು ಹೇಳಿಕೆ ಹಾಸ್ಯಾಸ್ಪದ: ಪವನ್

ಪವನ್
ಚಿಕ್ಕಮಗಳೂರು, ಮೇ 25: ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಎಸ್.ಪಿ.ದಿನೇಶ್ ಅವರಿಗೆ ಮತಚಲಾಯಿಸಿದರೆ ವ್ಯರ್ಥವಾಗುತ್ತದೆ ಎಂದು ಬಿಜೆಪಿ ಅಭ್ಯರ್ಥಿ ಆಯನೂರು ಮಂಜುನಾಥ್ ಹೇಳಿರುವುದು ಹಾಸ್ಯಾಸ್ಪದ ಎಂದು ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪವನ್ ಟೀಕಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೈರುತ್ಯ ಪದವೀಧರ ಕ್ಷೇತ್ರದಿಂದ ಇದುವರೆಗೂ ಬಿಜೆಪಿ ಅಭ್ಯರ್ಥಿಗಳೇ ಚುನಾಯಿತರಾಗಿದ್ದು, ವಿಧಾನಪರಿಷತ್ನಲ್ಲಿ ಈ ಸದಸ್ಯರು ಜಿಲ್ಲೆಯ ಹಾಗೂ ಕ್ಷೇತ್ರದ ಪದವೀಧರರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ ಒಂದೇ ಒಂದು ಉದಾಹರಣೆ ಇಲ್ಲ. ಪದವೀಧರರಿಗೆ ಬಿಜೆಪಿ ಸದಸ್ಯರು ಮಾಡಿದ ಯಾವುದಾದರೂ ಒಳ್ಳೆ ಕೆಲಸವಿದ್ದರೇ ಅದರ ಬಗ್ಗೆ ದಾಖಲೆ ನೀಡಲಿ. ಆಯನೂರು ಮಂಜುನಾಥ್ ಅವರು ರಾಜ್ಯಸಭೆ ಸದಸ್ಯರಾಗಿದ್ದಾಗ ಜಿಲ್ಲೆಗೆ ಯಾವುದೇ ಕೊಡುಗೆ ನೀಡಿಲ್ಲ. ಇಂತಹವರಿಗೆ ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಮಾತನಾಡಲು ಯಾವುದೇ ಅರ್ಹತೆ ಇಲ್ಲ. ಆಯನೂರು ಮಂಜುನಾಥ್ ಅವರು ಜಿಲ್ಲೆಯ ಪದವೀಧರರಲ್ಲಿ ಮತ ಕೇಳಲೂ ಅರ್ಹತೆ ಹೊಂದಿಲ್ಲ.
ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಅವರು ಹೋರಾಟದ ಹಿನ್ನೆಲೆಯಿಂದ ಬಂದವರು. ಕ್ಷೇತ್ರದ ಪದವೀಧರರ, ಶಿಕ್ಷಕರ ಸಮಸ್ಯೆಗಳ ಬಗ್ಗೆ ಅವರು ಈಗಾಗಲೇ ಸಾಕಷ್ಟು ಹೋರಾಟಗಳನ್ನು ಮಾಡಿದ್ದಾರೆ. ಈ ಬಾರಿಯ ನೈರುತ್ಯ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಗಳೇ ಚುನಾಯಿತರಾಗಲಿದ್ದಾರೆ ಎಂದು ಪವನ್ ವಿಶ್ವಾಸ ವ್ಯಕ್ತಪಡಿಸಿದರು.
ನೈರುತ್ಯ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾಗಿದ್ದು, ಜಿಲ್ಲೆಯಲ್ಲಿ ಪದವೀಧರ ಕ್ಷೇತ್ರದ ಮತದಾರರ ಸಂಖ್ಯೆ 8,785 ಇದ್ದು, ಜಿಲ್ಲೆಯಲ್ಲಿ ಒಟ್ಟು 12 ಬೂತ್ಗಳಲ್ಲಿ ಮತದಾನ ನಡೆಯಲಿದೆ. ಶಿಕ್ಷಕರ ಕ್ಷೇತ್ರದಲ್ಲಿ 3338 ಮತದಾರರಿದ್ದು, 8 ಬೂತ್ಗಳಲ್ಲಿ ಮತದಾನ ನಡೆಯಲಿದೆ ಎಂದ ಅವರು, ಮೂಡಿಗೆರೆ ತಾಲೂಕಿನ ಕಳಸ ಹೋಬಳಿ ಹಾಗೂ ತರೀಕೆರೆ ತಾಲೂಕಿನ ಅಜ್ಜಂಪುರ ಹೋಬಳಿ ಕೇಂದ್ರಗಳು ತಾಲೂಕು ಕೇಂದ್ರಗಳಿಂದ ದೂರ ಇರುವುದರಿಂದ ಈ ಹೋಬಳಿ ಕೇಂದ್ರಗಳಲ್ಲೇ ಪ್ರತ್ಯೇಕವಾಗಿ 2 ಹೆಚ್ಚುವರಿ ಬೂತ್ ಆರಂಭಿಸಲು ಹಾಗೂ ಬೂತ್ಗಳಲ್ಲಿ ಮತದಾರರಿಗೆ ಸ್ಥಳದಲ್ಲೇ ಭಾಗದ ಸಂಖ್ಯೆ, ಮತದಾರರ ಗುರುತಿನ ಚೀಟಿ ಸಂಖ್ಯೆ ತಿಳಿಸಲು ಕಂಪ್ಯೂಟರ್ ವ್ಯವಸ್ಥೆ ಒದಗಿಸಲು ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ. ಇದಕ್ಕೆ ಡಿಸಿ ಸ್ಪಂದಿಸಿದ್ದಾರೆ ಎಂದರು.
ನೈರುತ್ಯ ಪದವೀಧರ ಕ್ಷೇತ್ರದಿಂದ ಎಸ್.ಪಿ.ದಿನೇಶ್ ಹಾಗೂ ಶಿಕ್ಷಕರ ಕ್ಷೇತ್ರದಿಂದ ಕೆ.ಕೆ.ಮಂಜುನಾಥ್ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದಾರೆ. ಕಳೆದ ಬಾರಿ ಅಲ್ಪ ಮತಗಳ ಅಂತರದಿಂದ ಸೋಲು ಕಂಡಿದ್ದ ಈ ಅಭ್ಯರ್ಥಿಗಳನ್ನು ಮತದಾರರು ಈ ಬಾರಿ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕೆಂದು ಪವನ್ ಈ ವೇಳೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪ್ರಸಾದ್ ಅಮೀನ್, ಮುಖಂಡರಾದ ಡೊನಾಲ್ಟ್ ಪಿಂಟೊ, ಚಂದ್ರಶೇಖರ್, ಪ್ರಸನ್ನ, ಜಾನ್ ಉಪಸ್ಥಿತರಿದ್ದರು.







