ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ : ಸಂಜಯ್‍ಗೆ ಮಿ.ಚಿಕ್ಕಮಗಳೂರು ಪ್ರಶಸ್ತಿ

ಚಿಕ್ಕಮಗಳೂರು, ಮೇ 25: ಮಾರುತಿ ಮಲ್ಟಿ ಜಿಮ್ ಆಯೋಜಿಸಿದ್ದ ಜಿಲ್ಲಾ ಮಟ್ಟದ ದೇಹದಾರ್ಡ್ಯ ಸ್ಪರ್ಧೆಯಲ್ಲಿ ನಗರದ ಸ್ಟೇಡಿಯಂ ಜಿಮ್‍ನ ಸಂಜಯ್ ಅವರು ಮಿಸ್ಟರ್ ಚಿಕ್ಕಮಗಳೂರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮಾರುತಿ ಮಲ್ಟಿಜಿಮ್‍ನ ಸಲ್ಮಾನ್‍ಗೆ ಮಿಸ್ಟರ್ ಮಾರುತಿ, ಜಿ.ವಿನಯ್‍ಗೆ ಬೆಸ್ಟ್ ಫೋಸರ್, ಸುಭಾಷ್ ಶೆಟ್ಟಿಗೆ ಮೋಸ್ಟ್ ಮಸ್ಕ್ಯೂಲರ್ ಪ್ರಶಸ್ತಿ ಲಭಿಸಿದೆ.
ನಗರದ ಜೆವಿಎಸ್ ಶಾಲೆ ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ 6ನೇ ವರ್ಷದ ದೇಹದಾಡ್ರ್ಯ ಸ್ಪರ್ಧೆಯಲ್ಲಿ ಕಡೂರು, ತರೀಕೆರೆ, ಬೀರೂರು, ಕೊಪ್ಪ, ಶೃಂಗೇರಿ, ಮೂಡಿಗೆರೆ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ 40ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.
ಮಿಸ್ಟರ್ ಚಿಕ್ಕಮಗಳೂರು ಪ್ರಶಸ್ತಿ ಪಡೆದ ಸಂಜಯ್ ಅವರಿಗೆ 10ಸಾವಿರ ನಗದು, ಬೆಸ್ಟ್ ಫೋಸರ್ ಪ್ರಶಸ್ತಿ ಪಡೆದ ಜಿ.ವಿನಯ್‍ಗೆ 7ಸಾವಿರ ನಗದು, ಮೋಸ್ಟ್ ಮಸ್ಕ್ಯೂಲರ್ ಪ್ರಶಸ್ತಿ ಪಡೆದ ಸುಭಾಷ್ ಶೆಟ್ಟಿಗೆ 7 ಸಾವಿರ ನಗದು ಹಾಗೂ ಪಾರಿತೋಶಕ ನೀಡಿ ಗೌರವಿಸಲಾಯಿತು. ಮಿಸ್ಟರ್ ಮಾರುತಿ ಪ್ರಶಸ್ತಿ ಪಡೆದ ಸಲ್ಮಾನ್‍ಗೆ ಒಂದು ವರ್ಷ ಜಿಮ್‍ನಲ್ಲಿ ಉಚಿತ ಅಭ್ಯಾಸಕ್ಕೆ ಅವಕಾಶ ಕಲ್ಪಸಲಾಯಿತು.
ಸಮಾರಂಭವನ್ನು ಉದ್ಘಾಟಿಸಿದ ಶಾಸಕ ಸಿ.ಟಿ.ರವಿ ಮಾತನಾಡಿ, ಬಾಡಿ ಬಿಲ್ಡಿಂಗ್ ಒಂದು ಸ್ಪರ್ಧೆಯೇ ಹೊರತು ಯಾರ ಮೇಲೂ ನಮ್ಮ ತೋಳ್ಬಲ ಪ್ರದರ್ಶನಕ್ಕಿರುವುದಲ್ಲ. ಆರೋಗ್ಯ ಮತ್ತು ಶಾರೀರಿಕ ಸದೃಢತೆಗೆ ಇದೊಂದು ಸೂಕ್ತ ವೇದಿಕೆ. ಈ ಮೂಲಕ ನಿಮ್ಮ ಪ್ರತಿಭೆಯನ್ನು ಹೊರಹಾಕಿ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸುವಂತೆ ಶುಭಕೋರಿದರು.
ಲಕ್ನೋದಲ್ಲಿ ನಡೆದ ಪಂಜಕುಸ್ತಿಯಲ್ಲಿ ಚಿನ್ನದ ಪದಕ ಪಡೆದಿದ್ದ ದೀಪಕ್ ಅವರನ್ನು ಸನ್ಮಾನಿಸಲಾಯಿತು. ವ್ಯವಸ್ಥಾಪಕ ಸಂದೀಪ್, ಕರ್ನಾಟಕ ಅಮೆಚರ್ ಬಾಡಿಬಿಲ್ಡಿಂಗ್ ಅಸೋಸಿಯೇಶನ್‍ನ ವಿಶ್ವನಾಥ್, ಮಾರುತಿ ಮಲ್ಟಿಜಿಮ್‍ನ ಇಕ್ಬಾಲ್ ಮತ್ತಿತರರು ಉಪಸ್ಥಿತರಿದ್ದರು.







