ಮೇ 28ರಿಂದ ಶಾಲೆಗಳು ಪ್ರಾರಂಭ
ಶಾಲೆಗಳಿಗೆ ತಳಿರು ತೋರಣ ಕಟ್ಟಿ, ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಶಾಲೆ ಪ್ರಾರಂಭಿಸಲು ಸೂಚನೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಮೇ 25: ಪ್ರಸಕ್ತ ಸಾಲಿನ ಶಾಲೆಗಳು ಮೇ 28ರಿಂದ ಪ್ರಾರಂಭವಾಗಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಸಿದ್ಧತಾ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳುವಂತೆ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿಗಳಿಗೆ ಶಿಕ್ಷಣ ಇಲಾಖೆ ಸೂಚಿಸಿದೆ.
ಶಾಲೆಯ ಆವರಣ, ಶಾಲಾ ಕೊಠಡಿಗಳನ್ನು ಸ್ವಚ್ಛಗೊಳಿಸುವುದು, ಕುಡಿಯುವ ನೀರು ಮತ್ತು ಶೌಚಾಲಯಗಳು ಸುಸ್ಥಿತಿಯಲ್ಲಿರುವಂತೆ ವ್ಯವಸ್ಥೆಗೊಳಿಸುವುದು. ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸುವುದು, ವಿದ್ಯಾರ್ಥಿಗಳಿಗೆ ಸಾಧ್ಯವಾದಷ್ಟು ಮಟ್ಟಿಗೆ ಸಿಹಿ ಹಂಚುವ ಮೂಲಕ ಶಾಲೆಯನ್ನು ಪ್ರಾರಂಭಿಸಬೇಕು.
ನೂತನವಾಗಿ ದಾಖಲಾಗುವ ವಿದ್ಯಾರ್ಥಿಗಳಿಗೆ ಶಾಲಾ ಪ್ರಾರಂಭದ ದಿನ ಆಹ್ಲಾದಕರ ಸಂದರ್ಭ ಆಗಿರುವಂತೆ ನೋಡಿಕೊಳ್ಳಬೇಕು. ಪ್ರಾರಂಭಿಕ ದಿನದಿಂದಲೆ ಕಲಿಕಾ ಪೂರಕ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಇದರಿಂದ ವಿದ್ಯಾರ್ಥಿ ತನ್ನ ವ್ಯಾಸಂಗ ಅವಧಿಯಲ್ಲಿ ಲವಲವಿಕೆಯಿಂದ ಕಳೆಯಲು ಪ್ರೇರಣೆ ನೀಡಿದಂತೆ ಅಗುತ್ತದೆ ಎಂದು ಶಿಕ್ಷಣ ಇಲಾಖೆ ಶಾಲಾ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಿದೆ.
ಮಿಂಚಿನ ಸಂಚಾರ: ಮಿಂಚಿನ ಸಂಚಾರದ ಪ್ರಧಾನ ಆಶಯ ಎಲ್ಲ ಶಾಲೆಗಳು ತೆರೆಯಲ್ಪಟ್ಟಿವೆಯೆ ಮತ್ತು ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗಿದೆಯೆ ಎಂಬುದನ್ನು ಮೇಲ್ವಿಚಾರಕರು ಖಚಿತಪಡಿಸಿಕೊಳ್ಳುವ ಕಾರ್ಯಕ್ರಮವಾಗಿದೆ.
►ಮಿಂಚಿನ ಸಂಚಾರವು ಜೂ.1ರಿಂದ 8ರವರೆಗೆ ಹಮ್ಮಿಕೊಳ್ಳಲಾಗಿದೆ.
►ಬೆಳಗಿನ ಅವಧಿಯಲ್ಲಿ ಶಾಲೆಗೆ ಹಾಜರಾಗದ ಮಕ್ಕಳನ್ನು ಕರೆತರಲು ಬ್ಯಾಂಡ್ಸೆಟ್ ಅಥವಾ ವಿಶಿಷ್ಟ ಶೈಲಿಯಲ್ಲಿ ಬರಮಾಡಿಕೊಳ್ಳಲು ಜಾಥಾ ವ್ಯವಸ್ಥೆ ಮಾಡುವುದು.
►ಮಿಂಚಿನ ಸಂಚಾರ ತಂಡವು ಪ್ರತಿ ಶಾಲೆಗೆ ಭೇಟಿ ನೀಡಿ, ಶಾಲಾ ಕೊಠಡಿಗಳು, ಶಾಲೆಯ ಆವರಣ, ಶೌಚಾಲಯ, ಅಡಿಗೆ ಕೋಣೆ ಸ್ವಚ್ಛವಾಗಿದೆಯೆ ಎಂಬುದನ್ನು ಖಾತ್ರಿ ಪಡಿಸುತ್ತದೆ.







