ಉಡುಪಿ ಪೊಲೀಸ್ ಇಲಾಖೆಯಿಂದ ಫೇಸ್‌ಬುಕ್ ಖಾತೆ: ಎಸ್ಪಿ ನಿಂಬರಗಿ
ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಲಹೆಗೆ ಸ್ಪಂದನೆ

ಉಡುಪಿ, ಮೇ 25: ಸಾರ್ವಜನಿಕರೊಂದಿಗೆ ಉತ್ತಮ ಸಂಪರ್ಕ ಇಟ್ಟು ಕೊಳ್ಳುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ಫೇಸ್‌ಬುಕ್ ಖಾತೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ಬ.ನಿಂಬರಗಿ ತಿಳಿಸಿದ್ದಾರೆ.
ಚುನಾವಣೆಯ ಹಿನ್ನೆಲೆಯಲ್ಲಿ ಸ್ಥಗಿತಗೊಂಡು 55 ದಿನಗಳ ಬಳಿಕ ಇಂದು ಪುನಾರಂಭಗೊಂಡ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ನೀಡಿದ ಸಲಹೆಗೆ ಸ್ಪಂದಿಸಿ ಅವರು ಪ್ರತಿಕ್ರಿಯಿಸಿದರು. ಇಲಾಖೆಯ ವೆಬ್‌ಸೈಟ್ ಹಾಗೂ ಸುರಕ್ಷಾ ಆ್ಯಪ್ ಬಗ್ಗೆ ಹೆಚ್ಚಿನ ಸಾರ್ವಜನಿಕರು ತಿಳಿದುಕೊಳ್ಳದ ಕಾರಣ ಫೇಸ್‌ಬುಕ್ ಖಾತೆಯನ್ನು ಆರಂಭಿಸಲಾಗುವುದು. ಇಲ್ಲಿ ಸಾರ್ವಜನಿಕರ ದೂರು, ಸಲಹೆಗಳನ್ನು ಸ್ವೀಕರಿಸಲಾಗುವುದು ಎಂದರು.
ರಿಕ್ಷಾಗಳ ವಿರುದ್ಧ 5 ದೂರು: ಇಂದಿನ ಫೋನ್ ಇನ್ ಕಾರ್ಯಕ್ರಮ ದಲ್ಲಿ ಸಾರ್ವಜನಿಕರಿಂದ ಒಟ್ಟು 20 ಕರೆಗಳು ಬಂದಿದ್ದು, ಇವುಗಳಲ್ಲಿ ರಿಕ್ಷಾ ನಿಲ್ದಾಣ ಮತ್ತು ರಿಕ್ಷಾ ಚಾಲಕರಿಗೆ ಸಂಬಂಧಿಸಿ ಐದು ಕರೆಗಳಿದ್ದವು. ಇದರಲ್ಲಿ ರಿಕ್ಷಾ ಚಾಲಕರೇ ಕರೆ ಮಾಡಿ ಅನಧಿಕೃತ ರಿಕ್ಷಾಗಳ ಕುರಿತು ಮಾಹಿತಿ ನೀಡಿರುವುದು ವಿಶೇಷವಾಗಿತ್ತು.
ಉಡುಪಿ ನಗರದ ರಿಕ್ಷಾಗಳು ಮೀಟರ್ ಅಳವಡಿಕೆ ಮಾಡಲ್ಲ ಎಂಬ ದೂರಿಗೆ ಪ್ರತಿಕ್ರಿಯಿಸಿದ ಎಸ್ಪಿ, ನಾನು ಕೂಡ ನಾಲ್ಕೈದು ಬಾರಿ ನನ್ನ ಖಾಸಗಿ ಕೆಲಸಕ್ಕಾಗಿ ಯುನಿಫಾರ್ಮ್ ಧರಿಸದೆ ರಿಕ್ಷಾದಲ್ಲಿ ಪ್ರಯಾಣ ಬೆಳೆಸಿದ್ದೆ. ನಾನು ಎಸ್ಪಿ ಎಂಬುದು ಗೊತ್ತಿಲ್ಲದಿದ್ದರೂ ಚಾಲಕರು ಮೀಟರ್ ಹಾಕಿ ಕರೆದುಕೊಂಡು ಹೋಗಿದ್ದರು ಎಂದರು.
ನಗರದ ಹಲವು ಕಡೆ ಅನಧಿಕೃತ ರಿಕ್ಷಾ ನಿಲ್ದಾಣ, ಕೆಲವು ರಿಕ್ಷಾಗಳ ಮೀಟರ್‌ಗಳಲ್ಲಿ ನೂನ್ಯತೆ, ಕೆಲವು ರಿಕ್ಷಾ ಚಾಲಕರು ಯುನಿಫಾರ್ಮ್ ಹಾಕಲ್ಲ, ಪರವಾನಿಗೆ ಹೊಂದಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ಬಂದವು. ಉಡುಪಿಯ ರಿಕ್ಷಾ ಚಾಲಕರೊಬ್ಬರು ಕರೆ ಮಾಡಿ, ಬೇರೆ ನಿಲ್ದಾಣದ ರಿಕ್ಷಾ ಚಾಲಕರು ನಮಗೆ ದುಡಿಯಲು ಅವಕಾಶ ನೀಡುತ್ತಿಲ್ಲ ಎಂದು ದೂರು ನೀಡಿದರು.
ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ರಿಕ್ಷಾ ನಿಲ್ದಾಣದಲ್ಲಿರುವ ರಿಕ್ಷಾ ಚಾಲಕರು ಲೈಸನ್ಸ್ ಹಾಗೂ ದಾಖಲೆಗಳನ್ನು ಹೊಂದಿಲ್ಲ ಮತ್ತು ಕುಂದಾ ಪುರ ನಗರದಲ್ಲಿ 60-70 ಅನುಮತಿ ಇಲ್ಲದ ರಿಕ್ಷಾಗಳು ಕಾರ್ಯಾಚರಿಸುತ್ತಿವೆ ಎಂದು ರಿಕ್ಷಾ ಚಾಲರೇ ಪ್ರತ್ಯೇಕ ಕರೆ ಮಾಡಿ ದೂರಿದರು.
ಈ ಬಗ್ಗೆ ರಿಕ್ಷಾ ಚಾಲಕರ ಸಭೆ ಕರೆದು ಚರ್ಚೆ ಮಾಡಲಾಗುವುದು. ಸಮವಸ್ತ್ರ ಧರಿಸದ ಚಾಲಕರ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗುವುದು. ಕುಂದಾಪುರದ ಅನಧಿಕೃತ ರಿಕ್ಷಾಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಎಸ್ಪಿ ಈ ಎಲ್ಲ ದೂರಿಗಳಿಗೆ ಉತ್ತರಿಸಿದರು.
ಸಾವಿನ ತನಿಖೆಗೆ ಮನವಿ: ಇತ್ತೀಚೆಗೆ ಅಪಘಾತದಲ್ಲಿ ಮೃತಪಟ್ಟ ಕುಂದಾ ಪುರದ ಛಾಯಾಚಿತ್ರಗ್ರಾಹಕರೊಬ್ಬರ ಸಾವಿನ ಬಗ್ಗೆ ಅನುಮಾನ ಇದ್ದು, ಈ ಕುರಿತು ತನಿಖೆ ನಡೆಸುವಂತೆ ಸಾರ್ವಜನಿಕರೊಬ್ಬರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ಈ ಕುರಿತು ಪರಿಶೀಲನೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಇಂದ್ರಾಳಿ ರೈಲ್ವೆ ನಿಲ್ದಾಣದಿಂದ ಸಿಟಿ ಬಸ್ ನಿಲ್ದಾಣ ಹಾಗೂ ಮಣಿಪಾಲದ ವರೆಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಮತ್ತು ಬ್ರಹ್ಮಾವರ ಕಡೆಯಿಂದ ಬರುವ ಖಾಸಗಿ ಬಸ್‌ಗಳು ಕರಾವಳಿ ಜಂಕ್ಷನ್- ಬನ್ನಂಜೆ ಮಾರ್ಗವಾಗಿ ಉಡುಪಿಗೆ ಆಗಮಿಸು ತ್ತಿರುವುದರಿಂದ ಅಂಬಲಪಾಡಿ, ಅಜ್ಜರಕಾಡುವಿನ ಪ್ರಯಾಣಿಕರು ಉಡುಪಿಗೆ ಬರಲು ಎರಡೆರಡು ಬಸ್‌ಗಳನ್ನು ಅವಲಂಬಿಸಬೇಕಾಗುತ್ತದೆ ಎಂದು ದೂರು ಗಳು ಬಂದವು. ಈ ಕುರಿತು ಖಾಸಗಿ ಬಸ್ ಮಾಲಕರ ಸಂಘದ ಸಭೆ ಕರೆದು ಚರ್ಚಿಸುವಂತೆ ಡಿವೈಎಸ್ಪಿ ಜೈಶಂಕರ್ ಅವರಿಗೆ ಎಸ್ಪಿ ಸೂಚನೆ ನೀಡಿದರು.
ಉಡುಪಿ ನಗರದಹನುಮಾನ್ ವೃತ್ತ, ಚರ್ಚ್ ಹಾಗೂ ಕೋರ್ಟ್ ಎದುರು ಪಾದಚಾರಿಗಳು ರಸ್ತೆ ದಾಟಲು ತೊಂದರೆ ಅನುಭವಿಸುವ ಕುರಿತ ದೂರಿಗೆ ಪ್ರತಿಕ್ರಿಯಿಸಿದ ಅವರು, ಈ ಸ್ಥಳಗಳಲ್ಲಿ ಹೆಚ್ಚು ವಾಹನ ದಟ್ಟನೆ ಇರುವ ಸಮಯದಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು ಎಂದರು. ಬಾರಕೂರು ರಥಬೀದಿಯಲ್ಲಿರುವ ಹೊಟೇಲಿನಿಂದ ಬರುವ ತ್ಯಾಜ್ಯ ನೀರನ್ನು ತೆರೆದ ಚರಂಡಿಗೆ ಬಿಡುತ್ತಿರುವುದರಿಂದ ಇಡೀ ಪರಿಸರದಲ್ಲಿ ದುರ್ವಾಸನೆ, ಗಂಗೊಳ್ಳಿಯಲ್ಲಿ ಮತ್ತೆ ಮಟ್ಕಾ ದಂಧೆ ಆರಂಭ, ಮಣಿಪಾಲ ಈಶ್ವರನಗರ ಮತ್ತು ಸರಳೇಬೆಟ್ಟುವಿನಲ್ಲಿ ಬುಲೆಟ್‌ಗಳ ಕರ್ಕಶ ಶಬ್ದ, ಮಣಿಪಾಲ ಆಸ್ಪತ್ರೆಯ ಎಮರ್ಜೆನ್ಸಿ ಎದುರುಗಡೆ ಬಸ್‌ಗಳಿಂದ ಕರ್ಕಶ ಹಾರ್ನ್, ಉಡುಪಿ ಕಿನ್ನಿಮುಲ್ಕಿಯ ಕಾರ್ ಸರ್ವಿಸ್ ಎದುರುಗಡೆ ರಸ್ತೆಯಲ್ಲೇ ಕಾರು ನಿಲ್ಲಿಸಿ ವಾಹನ ಸಂಚಾರಕ್ಕೆ ತೊಂದರೆ, ಹಿರಿಯ ನಾಗರಿಕರಿಗೆ ಖಾಸಗಿ ಬಸ್‌ಗಳಲ್ಲಿ ರಿಯಾ ಯತಿಗೆ ಕೋರಿಕೆಯ ಕರೆಗಳು ಬಂದವು.
ಬೈಂದೂರು ಚುನಾವಣೆ ಸಮಯ ಠಾಣೆಯಲ್ಲಿ ಇರಿಸಲಾದ ಬಂದೂಕು ಗಳನ್ನು ನೀಡದ ಕುರಿತ ದೂರಿಗೆ ಸ್ಪಂದಿಸಿದ ಎಸ್ಪಿ, ಬಂದೂಕುಗಳನ್ನು ವಾರಸು ದಾರರಿಗೆ ಒಪ್ಪಿಸುವಂತೆ ಈಗಾಗಲೇ ಎಲ್ಲ ಠಾಣೆಗಳಿಗೆ ಸೂಚನೆ ನೀಡಲಾಗಿದೆ ಎಂದರು. ಆದಿಉಡುಪಿ ಪರಿಸರದಲ್ಲಿ ಸಂಜೆ ವೇಳೆ ಪೊಲೀಸ್ ಬೀಟ್ ವ್ಯವಸ್ಥೆ ಕಲ್ಪಿಸಬೇಕು. ಬಿಲ್ಲಾಡಿಯ ಕ್ರಶರ್‌ನಿಂದ ಕಲ್ಲುಗಳನ್ನು ಸಾಗಾಟ ಮಾಡುವ ಟಿಪ್ಪರ್‌ಗಳಿಗೆ ಸುರಕ್ಷತಾ ಕ್ರಮ ಪಾಲಿಸಲು ಕ್ರಮ ತೆಗೆದುಕೊಳ್ಳಬೇಕೆಂಬ ದೂರು ಗಳು ಬಂದವು. ಉಡುಪಿ ಡಿವೈಎಸ್ಪಿ ಜೈಶಂಕರ್ ಹಾಜರಿದ್ದರು.
ಮಟ್ಕಾ: ಆರು ಮಂದಿ ಗಡಿಪಾರು
ಮಟ್ಕಾ ದಂಧೆಗೆ ಸಂಬಂಧಿಸಿ ಈ ವರ್ಷ ಜಿಲ್ಲೆಯ ಆರು ಮಂದಿಯನ್ನು ಮೂರು ತಿಂಗಳ ಅವಧಿಗೆ ಉಡುಪಿ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಕಳೆದ ವರ್ಷ ಮರಳು ಮತ್ತು ಮಟ್ಕಾ ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿ ಯನ್ನು ಗಡಿಪಾರು ಮಾಡಲಾಗಿತ್ತು ಎಂದು ಎಸ್ಪಿ ಲಕ್ಷ್ಮಣ ಬ.ನಿಂಬರಗಿ ತಿಳಿಸಿದರು.
ಕಳೆದ ಎಪ್ರಿಲ್ ತಿಂಗಳಿನಿಂದ ಉಡುಪಿ ಜಿಲ್ಲೆಯಲ್ಲಿ 19 ಮಟ್ಕಾ ಪ್ರಕರಣ ದಲ್ಲಿ 21, 16 ಜುಗಾರಿ ಪ್ರಕರಣದಲ್ಲಿ 100, ನಾಲ್ಕು ಅಕ್ರಮ ಮದ್ಯ ಮಾರಾಟ ಪ್ರಕರಣದಲ್ಲಿ ನಾಲ್ಕು, 7 ಗಾಂಜಾ ಸೇವನೆ ಪ್ರಕರಣದಲ್ಲಿ 11 ಮಂದಿಯನ್ನು ಬಂಧಿಸಲಾಗಿದೆ. ಕೋಟ್ಪಾ 158, ಕುಡಿದು ಚಾಲನೆ 142, ಕರ್ಕಶ ಹಾರ್ನ್ 641, ಡ್ರೈವಿಂಗ್‌ನಲ್ಲಿ ಮೊಬೈಲ್ ಬಳಕೆ 215, ಹೆಲ್ಮೆಟ್ ಧರಿಸದೆ ಚಾಲನೆ 9150, ಅತಿವೇಗ 477, ಇತರ ಮೊಟಾರು ಕಾಯಿದೆ ಉಲ್ಲಂಘನೆ 12779 ಪ್ರಕರಣಗಳು ದಾಖಲಾಗಿವೆ ಎಂದರು.
ಕರೆ ಮಾಡಿದ ಪೊಲೀಸ್‌ನನ್ನು ಪತ್ತೆ ಹಚ್ಚಿದ ಎಸ್ಪಿ!
ಸಾರ್ವಜನಿಕರ ದೂರುಗಳನ್ನು ಸ್ವೀಕರಿಸುವುದಕ್ಕಾಗಿ ಹಮ್ಮಿಕೊಳ್ಳಲಾದ ಫೋನ್ ಇನ್ ಕಾರ್ಯಕ್ರಮಕ್ಕೆ ಪೊಲೀಸ್ ಸಿಬ್ಬಂದಿಯೊಬ್ಬ ಕರೆ ಮಾಡಿರುವುದನ್ನು ಎಸ್ಪಿ ಪತ್ತೆ ಹಚ್ಚಿದ ಘಟನೆ ನಡೆಯಿತು.
ಬೈಂದೂರಿನ ಪೊಲೀಸ್ ವಾಹನ ಚಾಲಕರನ್ನು ಬದಲಾಯಿಸುವಂತೆ ಕರೆ ಯೊಂದು ಬಂದಿತ್ತು. ಕರೆ ಮಾಡಿದ ವ್ಯಕ್ತಿ ಪೊಲೀಸ್ ಪೇದೆ ಇರಬೇಕೆಂಬುದನ್ನು ಅರಿತ ಎಸ್ಪಿ, ಆತನಲ್ಲಿ ಹಲವು ಪ್ರಶ್ನೆಗಳನ್ನು ಕೇಳಿದರು. ಕೊನೆಗೆ ‘ನಿನಗೆ ಎಲ್ಲಿ ಚಾಲಕ ವೃತ್ತಿ ಬೇಕಾಗಿದೆ’ ಎಂದು ಎಸ್ಪಿ ಪ್ರಶ್ನಿಸಿದರು. ಆಗ ಆತ ಕುಂದಾಪುರ ಅಥವಾ ಬೈಂದೂರು ಆಗಬಹುದು ಎಂದು ಉತ್ತರಿಸಿದನು. ಇದರಿಂದ ಆತ ಪೊಲೀಸ್ ಸಿಬ್ಬಂದಿ ಎಂಬುದು ಎಸ್ಪಿಗೆ ದೃಢಪಟ್ಟಿತು.







