ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಂ ಹೆಣ್ಮಕ್ಕಳಿಗೆ ಎಚ್ಚರಿಕೆ ಸಂದೇಶ : ಇಬ್ಬರು ಆರೋಪಿಗಳ ಸೆರೆ

ಮಂಗಳೂರು, ಮೇ 25: ರಮಝಾನ್ ತಿಂಗಳಲ್ಲಿ ಮಾಲ್‌ಗಳಲ್ಲಿ ಸುತ್ತಾಡಿದರೆ, ಊಟ ಮಾಡಿದರೆ ಕೊಲೆ ಮಾಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಹಾಕಿದ ಆರೋಪದ ಮೇರೆಗೆ ಪಾಂಡೇಶ್ವರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕುಪ್ಪೆಪದವಿನ ಮುಹಮ್ಮದ್ ಸಾದಿಕ್ (23) ಮತ್ತು ಕಡೇಶಿವಾಲಯದ ಅಬ್ದುಲ್ ಸತ್ತಾರ್ (35) ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಸೆಕ್ಷನ್ 153(ಎ) ಮತ್ತು 505, 506 ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಆರೋಪಿಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಹೆಣ್ಮಕ್ಕಳಿಗೆ ಬೆದರಿಕೆ ದಾಟಿಯಲ್ಲಿ ಎಚ್ಚರಿಕೆಯ ಸಂದೇಶ ಹಾಕಿದ್ದರು. ಆ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರ ಆಧಾರದ ಮೇಲೆ ಬಂಧಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಈ ಬೆದರಿಕೆ ಸಂದೇಶದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇತ್ತೀಚೆಗಷ್ಟೇ ಮಂಗಳೂರು ನಗರ ಪೊಲೀಸ್ ಆಯುಕ್ತರು ಸಮಾಜದ ಸ್ವಾಸ್ಥ ಕದಡುವ ಸಾಮಾಜಿಕ ಜಾಲತಾಣಗಳ ಅಡ್ಮಿನ್ ಸಹಿತ ಸಂದೇಶಗಳನ್ನು ರವಾನಿಸುವವರ ವಿರುದ್ಧ ಕಾನೂನು ಕ್ರಮ ಜರಗಿಸುವುದಾಗಿ ಎಚ್ಚರಿಸಿದ್ದರು. ಅದರಂತೆ ಪೊಲೀಸರು ಇಬ್ಬರನ್ನು ಬಂಧಿಸಿ ಸಮಾಜದ ಸ್ವಾಸ್ಥ ಕದಡುವವರ ವಿರುದ್ಧ ಸಮರ ಸಾರಿದ್ದಾರೆ.





