ಮೋದಿ ಸರಕಾರ ಹಲವು ಕ್ಷೇತ್ರಗಳಲ್ಲಿ ವಿಫಲ: ಆರೆಸ್ಸೆಸ್

ಹೊಸದಿಲ್ಲಿ, ಮೇ 25: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಕಳೆದ ನಾಲ್ಕು ವರ್ಷಗಳ ಕಾರ್ಯ ನಿರ್ವಹಣೆಯ ಪುನರಾವಲೋಕನವನ್ನು ಮೇ 28-31ರ ವರೆಗೆ ಆರೆಸ್ಸೆಸ್ ನಡೆಸಲಿದೆ.
ಸರಕಾರ ಹಲವು ಕ್ಷೇತ್ರಗಳಲ್ಲಿ ವಿಫಲವಾಗಿದೆ ಎಂದು : ಆರೆಸ್ಸೆಸ್ ಹೇಳಿದೆ. ಸಭೆಯಲ್ಲಿ ಆರೆಸ್ಸೆಸ್ ನಾಯಕರಾದ ದತ್ತಾತ್ರೇಯ ಹೊಸಬಾಳೆ ಹಾಗೂ ಕೃಷ್ಣ ಗೋಪಾಲ್ ಭಾಗವಹಿಸಲಿದ್ದಾರೆ. ಬಿಜೆಪಿಯ ಪರವಾಗಿ ಬಿಜೆಪಿಯ ಅಧ್ಯಕ್ಷ ಅಮಿತ್ ಶಾ ಹಾಗೂ ನಾಯಕ ರಾಮ್ ಲಾಲ್ ಪಾಲ್ಗೊಳ್ಳಲಿದ್ದಾರೆ.
ಸಭೆಯಲ್ಲಿ ಸರಕಾರದ ವಿವಿಧ ಸಚಿವಾಲಯಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪ್ರತಿ ದಿನ ಚರ್ಚಿಸಲಾಗುವುದು ಹಾಗೂ ಇದನ್ನು ಅನುಸರಿಸಿ ಮಾಡಬೇಕಾದ ಹಾಗೂ ಮಾಡಬಾರದ ಕೆಲಸಗಳ ವರದಿ ರೂಪಿಸಲಾಗುವುದು. ನಾಲ್ಕು ದಿನಗಳಲ್ಲಿ ಒಂದು ದಿನ ಆರ್ಥಿಕ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಈ ಚರ್ಚೆಯಲ್ಲಿ ಹಣಕಾಸು ಸಚಿವರು ಪಾಲ್ಗೊಳ್ಳಲಿದ್ದಾರೆ. ಉದ್ಯೋಗ ಹಾಗೂ ಹಣದುಬ್ಬರದ ವಿಷಯದಲ್ಲಿ ಚರ್ಚೆ ನಡೆಯಲಿದೆ.
ಇದೇ ರೀತಿ ಶಿಕ್ಷಣ, ವಿದೇಶಿ ನೀತಿ ಹಾಗೂ ಭದ್ರತೆ ಬಗ್ಗೆ ವಿವಿಧ ಅಧಿವೇಶನಗಳನ್ನು ಏರ್ಪಡಿಸಲಾಗಿದೆ. ಕೇಂದ್ರ ಸಚಿವ ರಾಜನಾಥ್ ಸಿಂಗ್ ಕೂಡ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 2019ರ ಸಾರ್ವತ್ರಿಕ ಚುನಾವಣೆಗೆ ಸಿದ್ಧತೆ ನಡೆಸಲು ಎಲ್ಲ ಸಚಿವಾಲಯಗಳಿಗೆ ಮಾರ್ಗನಕ್ಷೆಯನ್ನು ಕೂಡ ಸಿದ್ಧಪಡಿಸಲಾ ಗುವುದು ಎಂದು ಮೂಲಗಳು ತಿಳಿಸಿವೆ.





