ಪಾಲಿಶ್ ಹಾಕಿಕೊಡುವ ನೆಪದಲ್ಲಿ 1.50 ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರ ಅಪಹರಿಸಿದ ವಂಚಕರು!
ಶಿವಮೊಗ್ಗ, ಮೇ 25: ಬಂಗಾರ-ಬೆಳ್ಳಿಯ ಆಭರಣಗಳಿಗೆ ಪಾಲಿಶ್ ಹಾಕಿಕೊಡುವ ನೆಪದಲ್ಲಿ ನಯವಂಚಕರಿಬ್ಬರು ಲಕ್ಷಾಂತರ ರೂ. ಮೌಲ್ಯದ ಮಾಂಗಲ್ಯ ಸರ ಅಪಹರಿಸಿ ಪರಾರಿಯಾಗಿರುವ ಘಟನೆ, ಶಿವಮೊಗ್ಗ ನಗರದ ಗೋಪಾಲಗೌಡ ಬಡಾವಣೆ ಎ ಬ್ಲಾಕ್‍ನ 1 ನೇ ಕ್ರಾಸ್‍ನಲ್ಲಿ ವರದಿಯಾಗಿದೆ.
ನಿವೃತ್ತ ಗ್ರಾಮ ಪಂಚಾಯತ್ ಕಾರ್ಯದರ್ಶಿ ಸುಬ್ರಹ್ಮಣ್ಯ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ. ಅವರ ಪತ್ನಿಗೆ ಸೇರಿದ 60 ಗ್ರಾಂ ತೂಕದ, ಅಂದಾಜು 1.50 ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರವನ್ನು ವಂಚಕರು ಅಪಹರಿಸಿ ಪರಾರಿಯಾಗಿದ್ದಾರೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ: ಮೇ 24 ರಂದು ಈರ್ವರು ಅಪರಿಚಿತರು ಪಿರ್ಯಾದಿ ಸುಬ್ರಹ್ಮಣ್ಯ ಮನೆಗೆ ಆಗಮಿಸಿದ್ದಾರೆ. ಚಿನ್ನಾಭರಣಗಳಿಗೆ ಪಾಲಿಶ್ ಹಾಕುವ ಕೆಲಸ ಮಾಡುವವರೆಂದು ಹೇಳಿದ್ದಾರೆ. ನಿಮ್ಮ ಮನೆಯಲ್ಲಿರುವ ಚಿನ್ನ ಹಾಗೂ ಬೆಳ್ಳಿಯ ಆಭರಣಗಳಿಗೆ ಪಾಲಿಶ್ ಹಾಕಿಕೊಡುವುದಾಗಿ ತಿಳಿಸಿದ್ದಾರೆ. ಆದರೆ ಪಿರ್ಯಾದಿ ಮನೆಯವರು ಅನುಮಾನಗೊಂಡು ತಮ್ಮ ಮನೆಯಲ್ಲಿ ಯಾವುದೇ ಚಿನ್ನಾಭರಣಗಳಿಲ್ಲವೆಂದು ತಿಳಿಸಿದ್ದಾರೆ.
ಇದರ ಹೊರತಾಗಿಯೂ ಆರೋಪಿಗಳು ಪಿರ್ಯಾದಿ ಪತ್ನಿಯ ಬೆಳ್ಳಿಯ ಕಾಲುಂಗರ ಪಡೆದು ಪಾಲಿಶ್ ಮಾಡಿ ಕೊಟ್ಟಿದ್ದಾರೆ. ನಂತರ ಮಾಂಗಲ್ಯ ಸರವನ್ನು ಒತ್ತಾಯ ಮಾಡಿ ಪಡೆದುಕೊಂಡಿದ್ದಾರೆ. ನಂತರ ಪಾಲಿಶ್ ಮಾಡುವ ನಾಟಕವಾಡಿದ್ದಾರೆ. ತದನಂತರ ಕುಕ್ಕರ್ ತರುವಂತೆ ಹೇಳಿದ್ದಾರೆ.
ಕುಕ್ಕರ್ ಗೆ ನೀರು ಹಾಕಿದ್ದಾರೆ. ಅರಿಶಿಣ ಮತ್ತು ಅವರ ಬಳಿಯಿದ್ದ ಪಾಲಿಶ್ ಪೌಡರ್ ಮಿಶ್ರಣ ಮಾಡಿದ್ದಾರೆ. ಅದರೊಳಗೆ ಮಾಂಗಲ್ಯ ಸರ ಹಾಕುವ ರೀತಿ ನಟಿಸಿ, ಕುಕ್ಕರ್ ಮುಚ್ಚಳ ಮುಚ್ಚಿದ್ದಾರೆ. 10 ನಿಮಿಷಗಳ ನಂತರ ಮುಚ್ಚಳ ತೆರೆದು ಮಾಂಗಲ್ಯ ಸರ ಪಡೆದುಕೊಳ್ಳುವಂತೆ ಹೇಳಿ ಮನೆಯಿಂದ ತೆರಳಿದ್ದಾರೆ.
ವಂಚಕರ ಸೂಚನೆಯಂತೆ 10 ನಿಮಿಷದ ನಂತರ ಕುಕ್ಕರ್ ಮುಚ್ಚಳ ತೆರೆದು ಮನೆಯವರು ಪರಿಶೀಲಿಸಿದಾಗ, ಅದರೊಳಗೆ ಮಾಂಗಲ್ಯ ಸರ ಇಲ್ಲದಿರುವುದು ಪತ್ತೆಯಾಗಿದೆ. ವಂಚನೆಗೊಳಗಾಗಿರುವುದು ಗೊತ್ತಾಗಿದ್ದು, ಪೊಲೀಸರ ಗಮನಕ್ಕೆ ಈ ವಿಷಯ ತಂದಿದ್ದಾರೆ.







