ಶಿವಮೊಗ್ಗ; ನಿಪಾಹ್ ಸೋಂಕಿಲ್ಲ : ಪುಣೆ ಲ್ಯಾಬೋರೇಟರಿ ವರದಿಯಿಂದ ಸಾಬೀತು
ಶಿವಮೊಗ್ಗ, ಮೇ 25: ಜಿಲ್ಲೆಯ ಸಾಗರ ತಾಲೂಕಿನ ಶಿರವಂತೆ ಗ್ರಾಮದ ಯುವಕನೋರ್ವನಲ್ಲಿ ಶಂಕಿತ ನಿಪಾಹ್ ವೈರಸ್ ಕಂಡುಬಂದಿದೆ ಎಂದು ಮಾಧ್ಯಮಗಳಲ್ಲಿ ವ್ಯಾಪಕ ಸುದ್ದಿಯಾಗಿದ್ದ ವಿಷಯಕ್ಕೆ ಅಂತಿಮ ತೆರೆ ಬಿದ್ದಿದ್ದು, ಯುವಕನನಲ್ಲಿ ನಿಪಾಹ್ ವೈರಸ್ ಕಂಡುಬಂದಿಲ್ಲ ಎಂದು ಮಹಾರಾಷ್ಟ್ರದ ಪುಣೆಯ ಆರ್ ಪಿಸಿಆರ್ ಲ್ಯಾಬೋರೇಟರಿ ವರದಿ ಸ್ಪಷ್ಟಪಡಿಸಿದೆ.
ಕಳೆದ ಒಂದು ತಿಂಗಳ ಹಿಂದೆ ಶಿರವಂತೆ ಗ್ರಾಮದ 23 ವರ್ಷದ ಯುವಕ ಕೇರಳದ ದೇವಾಲಯವೊಂದಕ್ಕೆ ಭೇಟಿ ನೀಡಿ ಬಂದಿದ್ದರು. ಕಳೆದ ಮೂರು ದಿನಗಳ ಹಿಂದೆ ಅವರಲ್ಲಿ ಜ್ವರ ಕಾಣಿಸಿಕೊಂಡಿದ್ದು, ಸಾಗರ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ ಆಸ್ಪತ್ರೆಗೆ ದಾಖಲಾಗಿರಲಿಲ್ಲ. ಅವರ ಆರೋಗ್ಯದಲ್ಲಿಯೂ ಚೇತರಿಕೆ ಕಂಡುಬಂದು, ಆರಾಮಾಗಿದ್ದರು.
ಉಪ ವಿಭಾಗೀಯ ಆಸ್ಪತ್ರೆ ವೈದ್ಯರು ಯುವಕನ ರಕ್ತದ ಮಾದರಿ ಸಂಗ್ರಹಿಸಿದ್ದರು. ಈ ನಡುವೆ ಮಾಧ್ಯಮಗಳಲ್ಲಿ ಯುವಕನಲ್ಲಿ ಶಂಕಿತ ನಿಪಾಹ್ ವೈರಸ್ ಇರುವ ಕುರಿತಂತೆ ಸುದ್ದಿ ಬಿತ್ತರಿಸಿದ್ದವು. ಸಾಮಾಜಿಕ ಜಾಲತಾಣಗಳಲ್ಲಿಯೂ ಇದು ಭಾರೀ ಚರ್ಚೆಯಾಗಿತ್ತು. ಇದರಿಂದ ಜಿಲ್ಲೆಯ ನಾಗರೀಕರು ಆತಂಕಗೊಳ್ಳುವಂತಾಗಿತ್ತು.
ಮತ್ತೊಂದೆಡೆ ಜಿಲ್ಲಾ ಆರೋಗ್ಯ ಇಲಾಖೆಯು ಯುವಕನ ರಕ್ತದ ಮಾದರಿಯನ್ನು ಪುಣೆಯ ಆರ್ ಪಿಸಿಆರ್ ಲ್ಯಾಬೋರೇಟರಿಗೆ ತಪಾಸಣೆಗೆ ಕಳುಹಿಸಿತ್ತು. ಇದೀಗ ಲ್ಯಾಬೋರೇಟರಿಯ ವೈದ್ಯಕೀಯ ವರದಿ ಆರೋಗ್ಯ ಇಲಾಖೆಗೆ ಬಂದಿದ್ದು, ಯುವಕನು ನಿಪಾಹ್ ಬಾಧೆಯಿಂದ ಬಳಲುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.







