ಎನ್‌ಪಿಎಸ್ ರದ್ದು, ಕಾಲ್ಪನಿಕ ವೇತನ ಸಮಸ್ಯೆ ಇತ್ಯರ್ಥ: ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಭೋಜೇಗೌಡ ಭರವಸೆ

ಉಡುಪಿ, ಮೇ 25: ಪದವಿಪೂರ್ವ ಕಾಲೇಜಿನ ಉಪನ್ಯಾಸಕರು ಹಾಗೂ ಪ್ರೌಢ ಶಾಲಾ ಶಿಕ್ಷಕರಿಗೆ ಮಾರಕವಾಗಿರುವ ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್)ಯನ್ನು ರದ್ದು ಪಡಿಸಿ ಹಳೆಯ ಪಿಂಚಣಿ ಯೋಜನೆ ಜಾರಿ ಹಾಗೂ ಶಿಕ್ಷಕರ ಕಾಲ್ಪನಿಕ ವೇತನ ಸಮಸ್ಯೆಯನ್ನು ಬಗೆಹರಿಸಲು ತಾವು ಆದ್ಯತೆ ನೀಡುವುದಾಗಿ ಕರ್ನಾಟಕ ರಾಜ್ಯ ವಿಧಾನಪರಿಷತ್‌ನ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಸ್.ಎಲ್. ಭೋಜೇಗೌಡ ಅವರು ಭರವಸೆ ನೀಡಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ತಿಂಗಳು ನಡೆಯುವ ಚುನಾವಣೆಯಲ್ಲಿ ತಾವು ಆಯ್ಕೆಯಾಗಿ ಬಂದರೆ ರಾಜ್ಯದ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ತಾವು ಕೈಗೊಳ್ಳುವ ಕ್ರಮಗಳ ಕುರಿತು ವಿವರಿಸಿದರು.
ಅನುದಾನಿತ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢ ಶಾಲಾ ಶಿಕ್ಷಕರ ಕಾಲ್ಪನಿಕ ವೇತನ ಸಮಸ್ಯೆಯನ್ನು ಬಗೆಹರಿಸಲು ಬಸವರಾಜ ಹೊರಟ್ಟಿ ನೇತೃತ್ವದ ಸಮಿತಿ ವರದಿಯನ್ನು ಕೂಡಲೇ ಜಾರಿಗೊಳಿಸಲು ಹಾಗೂ ಹೊಸ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಮತ್ತೆ ಜಾರಿಗೊಳಿಸಲು ರಾಜ್ಯದಲ್ಲೀಗ ಅಸ್ತಿತ್ವಕ್ಕೆ ಬಂದಿರುವ ತಮ್ಮದೇ ಜೆಡಿಎಸ್ ಸರಕಾರದ ಮೂಲಕ ಪ್ರಯತ್ನಿಸುವುದಾಗಿ ತಿಳಿಸಿದರು.
ಕಳೆದ ಹಲವು ವರ್ಷಗಳಿಂದ ಪದವೀಧರರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಆಯ್ಕೆಯಾಗುತಿದ್ದು, ಅವರಿಂದ ಈ ಎರಡೂ ವರ್ಗದ ಜನರ ಯಾವುದೇ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಿಲ್ಲ. ಶಿಕ್ಷಕರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಯಾವುದೇ ರೀತಿಯಲ್ಲಿ ಸ್ಪಂದಿಸುವಲ್ಲಿ ಇವರು ವಿಫಲರಾಗಿದ್ದಾರೆ ಎಂದರು.
ಶಿಕ್ಷಣ ಸಂಸ್ಥೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು, ಶಿಕ್ಷಕರ ವೇತನ ತಾರತಮ್ಯವನ್ನು ಬಗೆಹರಿಸುವುದು, ವಿದ್ಯಾರ್ಥಿಗಳಿಗೆ ಶಾಲಾ ಆರಂಭದಲ್ಲಿ ಪಠ್ಯಪುಸ್ತಕ ದೊರೆಯುವಂತೆ ಮಾಡುವಲ್ಲಿ ಈ ಜನಪ್ರತಿನಿಧಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದವರು ದೂರಿದರು.
ಅಲ್ಲದೇ ಈ ಬಾರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ಅಧಿಕಾರಿಗಳೇ ಸೇರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢ ಶಾಲೆಗಳ ರಜಾ ದಿನಗಳನ್ನು ಏಕಪಕ್ಷೀಯವಾಗಿ ಕಡಿತ ಮಾಡಿರುವುದನ್ನು ಬೋಜೇಗೌಡ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
1972ರಲ್ಲೇ ಸರಕಾರ ಶಿಕ್ಷಣ ಇಲಾಖೆಯನ್ನು ರಜಾ ಇಲಾಖೆಯಿಂದ ಘೋಷಿಸಿದೆ. ಆದರೆ ಐಎಎಸ್ ಅಧಿಕಾರಿಗಳು ರಜಾ ರಹಿತ ಇಲಾಖೆಯಿಂದ ಘೋಷಿಸದೇ ರಜೆಯನ್ನು ಕಡಿತಗೊಳಿಸಿದ್ದಾರೆ. ಈವರೆಗೆ ಲಭ್ಯವಾಗುತಿದ್ದ ರಜಾ ಸೌಲಭ್ಯಗಳನ್ನು ನೀಡುವುದು ಸರಕಾರದ ಕರ್ತವ್ಯವಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ, ಹೆತ್ತವರಿಗೆ ಹಾಗೂ ಶಿಕ್ಷಕರಿಗೆ ಅನ್ಯಾಯವಾಗಿದೆ. 1972ರ ಕಾಯ್ದೆಗೆ ತಿದ್ದುಪಡಿ ಮಾಡದೇ ಅವೈಜ್ಞಾನಿಕ ಕ್ರಮವನ್ನು ಅನುಷ್ಠಾನಗೊಳಿಸಿ ರುವುದು ತಪ್ಪು ಎಂದವರು ಹೇಳಿದರು.
ಮಕ್ಕಳು ರಜಾ ದಿನ ಕಳೆದು ಶಾಲೆಗೆ ಬರುವಾಗ ಅವರ ಬಳಿ ಪಠ್ಯಪುಸ್ತಕ ವಿರಬೇಕು. ಪಠ್ಯಪುಸ್ತಕವಿಲ್ಲದೇ ಮಕ್ಕಳು ಏನನ್ನು ಕಲಿಯುತ್ತಾರೆ ಹಾಗೂ ಶಿಕ್ಷಕರು ಏನನ್ನು ಕಲಿಸುತ್ತಾರೆ ಎಂದು ಪ್ರಶ್ನಿಸಿದ ಬೋಜೇಗೌಡ, ಫಠ್ಯಪುಸ್ತಕವನ್ನು ನೀಡದೇ ತರಗತಿ ಆರಂಭಿಸಿರುವುದು ಸರಿಯಲ್ಲ ಎಂದರು.
ವೈದ್ಯಕೀಯ ಸೌಲಭ್ಯ: ರಾಜ್ಯದ ಅನುದಾನ ರಹಿತ ವಿದ್ಯಾಸಂಸ್ಥೆಗಳಲ್ಲಿ ದುಡಿಯುತ್ತಿರುವ ಶಿಕ್ಷಕರಿಗೆ, ಸರಕಾರಿ ಹಾಗೂ ಅನುದಾನಿತ ಶಾಲಾ ಶಿಕ್ಷಕರಿಗೆ ಸಿಗುವಂತೆ ವೈದ್ಯಕೀಯ ಸೌಲಭ್ಯಗಳನ್ನು ನೀಡಲು ತಾವು ಶ್ರಮಿಸುವುದಾಗಿ ಅವರು ನುಡಿದರು. ಈ ತಾರತಮ್ಯ ನೀತಿಯನ್ನು ಹೋಗಲಾಡಿಸಲು ಪ್ರಯತ್ನಿಸುವುದಾಗಿ ಹೇಳಿದ ಗೌಡರು, ಜೆಡಿಎಸ್ ಚುನಾವಣಾ ಪ್ರಣಾಳಿಕೆಯಲ್ಲಿ ಈ ಎಲ್ಲಾ ಅಂಶಗಳಿದ್ದು, ಇವುಗಳನ್ನು ಜಾರಿಗೊಳಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಮೇಲೆ ಒತ್ತಡ ಹೇರುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪದವೀಧರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅರುಣ್ ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಶೇಖರ್ ಕೋಟ್ಯಾನ್ ಉಪಸ್ಥಿತರಿದ್ದರು.







