ಪುನರ್ವಸತಿ ಕೇಂದ್ರದ ಆಶ್ರಯದಲ್ಲಿದ್ದ ಕೇರಳ ಮೂಲದ ಯುವತಿ ಪೋಷಕರಿಗೆ ಹಸ್ತಾಂತರ
ಮಂಗಳೂರು, ಮೇ 25: ‘ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು’ ಎಂಬ ಕಾರಣಕ್ಕೆ ಅಕ್ರಮ ಗೃಹಬಂಧನದಿಂದ ಮುಕ್ತಿಹೊಂದಿ ನಗರದ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದ ಕೇರಳ ಮೂಲದ ಯುವತಿಯನ್ನು ನ್ಯಾಯಾಲಯದ ಆದೇಶದ ಮೇರೆಗೆ ಪೋಷಕರಿಗೆ ಹಸ್ತಾಂತರಿಸಲಾಗಿದೆ.
ಕೆಲವು ದಿನಗಳ ಹಿಂದೆ ಕೇರಳದ ತ್ರಿಶ್ಯೂರ್ ಮೂಲದ ಯುವತಿಯನ್ನು ಬರ್ಕೆ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಅಕ್ರಮವಾಗಿ ಬಂಧನದಲ್ಲಿರಿಸಲಾಗಿತ್ತು. ಅಂದರೆ ತನ್ನನ್ನು ಸಂಬಂಧಿಕರು ಸೇರಿಕೊಂಡು ಹೀಗೆ ಗೃಹಬಂಧನದಲ್ಲಿರಿಸಿದ್ದಾರೆ ಎಂದು ಆರೋಪಿಸಿ ಖುದ್ದು ಯುವತಿಯೇ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಯೊಬ್ಬರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ತನ್ನ ಪರಿಸ್ಥಿತಿ ಬಗ್ಗೆ ವಿವರಿಸಿದ್ದರು. ಅಲ್ಲದೆ ತನ್ನನ್ನು ಗೃಹ ಬಂಧನದಲ್ಲಿರಿಸಿರುವುದನ್ನು ಮೊಬೈಲ್ ಮೂಲಕ ವೀಡಿಯೊ ಚಿತ್ರೀಕರಣ ಮಾಡಿಕೊಂಡು ಪೊಲೀಸ್ ಅಧಿಕಾರಿಗೆ ಕಳುಹಿಸಿದ್ದರು. ಈ ವೀಡಿಯೊ ತುಣುಕು ವೈರಲ್ ಆಗಿತ್ತು. ಅಲ್ಲದೆ ಯುವತಿಯ ದೂರನ್ನು ಆಧರಿಸಿ ಬರ್ಕೆ ಠಾಣೆ ಪೊಲೀಸರ ಮೂಲಕ ಯುವತಿ ಇದ್ದ ಜಾಗವನ್ನು ಪತ್ತೆ ಹಚ್ಚಿ ಆಕೆಯನ್ನು ರಕ್ಷಿಸಲಾಗಿತ್ತು.
ಅಕ್ರಮ ಬಂಧನದಲ್ಲಿದ್ದ ಯುವತಿಯನ್ನು ರಕ್ಷಿಸಿದ ಪೊಲೀಸರು ಬಳಿಕ ನಗರದ ಸಾಂತ್ವನ-ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಕಲ್ಪಿಸಿದ್ದರು. ಈ ಮಧ್ಯೆ ಯುವತಿಯೇ ತನ್ನ ಸ್ಥಿತಿಯ ಬಗ್ಗೆ ದೂರು ನೀಡಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ಆಕೆಯ ಬಿಡುಗಡೆಗೆ ಆದೇಶಿಸಿದೆ. ಅದರಂತೆ ಗುರುವಾರ ಆಕೆಯ ಪೋಷಕರಿಗೆ ಹಸ್ತಾಂತರಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ನಗರ ಉಪಾಯುಕ್ತೆ ಉಮಾ ಪ್ರಶಾಂತ್ ‘ನ್ಯಾಯಾಲಯದ ಆದೇಶದ ಮೇರೆಗೆ ಗುರುವಾರ ಆಕೆಯನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ. ತನ್ಮಧ್ಯೆ ಯುವತಿಯನ್ನು ಅಕ್ರಮ ಗೃಹಬಂಧನದಲ್ಲಿರಿಸಿದ್ದ ಆರೋಪದ ಮೇಲೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅದರ ತನಿಖೆಯೂ ಮುಂದುವರಿದಿದೆ.







