ನಕಲಿ ಪಾಸ್‌ಪೋರ್ಟ್ ಬಳಸಿ ವಿದೇಶಕ್ಕೆ ತೆರಳಲು ಯತ್ನ: ಆರೋಪಿ ಸೆರೆ

ಮಂಗಳೂರು, ಮೇ 25: ನಕಲಿ ಪಾಸ್‌ಪೋರ್ಟ್ ಬಳಸಿ ವಿದೇಶಕ್ಕೆ ಪ್ರಯಾಣಿಸಲು ಯತ್ನಿಸಿದ ಕೇರಳ ಮೂಲದ ಯುವಕನನ್ನು ಇಮಿಗ್ರೇಶನ್ ಅಧಿಕಾರಿಗಳು ಗುರುವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆ ಹಚ್ಚಿ ಬಜ್ಪೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಕಾಸರಗೋಡು ಸಮೀಪದ ಬೈಲಂಗಡಿ ಪೆರುಂಬಳೆ ನಿವಾಸಿ ಸಂತೋಷ್ (30) ಬಂಧಿತ ಆರೋಪಿಯಾಗಿದ್ದಾನೆ. ಈತ ದುಬೈಗೆ ತೆರಳಲು ಗುರುವಾರ ರಾತ್ರಿ 9 ಗಂಟೆಗೆ ವಿಮಾನ ನಿಲ್ದಾಣಕ್ಕೆ ತೆರಳಿದ್ದ. ಅಲ್ಲಿ ದಾಖಲೆ ತಪಾಸಣೆ ವೇಳೆ ತಂಬನ್ ಎನ್ನುವ ಹೆಸರಿನ ವ್ಯಕ್ತಿಯ ಪಾಸ್‌ಪೋರ್ಟ್‌ನಲ್ಲಿ ಈತ ಪ್ರಯಾಣಿಸುತ್ತಿರುವುದು ಇಮಿಗ್ರೇಶನ್ ಅಧಿಕಾರಿಗಳ ಗಮನಕ್ಕೆ ಬಂದಿದೆ. ತಕ್ಷಣ ಎಚ್ಚೆತ್ತ ಅಧಿಕಾರಿಗಳು ಸಂತೋಷ್‌ನನ್ನು ವಶಕ್ಕೆ ತೆಗೆದುಕೊಂಡು ಮುಂದಿನ ತನಿಖೆಗಾಗಿ ಬಜ್ಪೆ ಪೊಲೀಸರಿಗೆ ಒಪ್ಪಿಸಿದರು.
ದುಬೈಯಲ್ಲಿ ಉದ್ಯೋಗ ಮಾಡುತ್ತಿದ್ದ ಸಂತೋಷ್, 8 ತಿಂಗಳ ಹಿಂದೆ ಊರಿಗೆ ಬಂದಿದ್ದ. ಆ ಸಂದರ್ಭವೂ ಇದೇ ಪಾಸ್‌ಪೋರ್ಟ್ ಮೂಲಕ ಆತ ಪ್ರಯಾಣಿಸಿದ್ದ. ತಂಬನ್ ಎನ್ನುವ ಹೆಸರಿನಲ್ಲಿರುವ ಪಾಸ್‌ಪೋರ್ಟನ್ನು ಕಾಸರಗೋಡು ಪರಿಸರದ ಏಜೆಂಟರಾದ ಅಬ್ದುಲ್ಲಾ ಹಾಗೂ ಹನೀಫ್ ಎಂಬವರು ನೀಡಿದ್ದಾರೆ ಎಂದು ವಿಚಾರಣೆ ವೇಳೆ ಆರೋಪಿ ಸಂತೋಷ್ ಬಾಯ್ಬಿಟ್ಟಿದ್ದಾನೆ.
ಶುಕ್ರವಾರ ವಿಮಾನ ನಿಲ್ದಾಣದ ಇಮಿಗ್ರೇಶನ್ ಅಧಿಕಾರಿಗಳು ಆರೋಪಿ ಸಂತೋಷ್‌ನನ್ನು ಬಜ್ಪೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯ 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಮಧ್ಯೆ ತಂಬನ್ ಕೂಡಾ ಈ ಪ್ರಕರಣದಲ್ಲಿ ಅಪರಾಧಿಯಾಗಿದ್ದು, ಆತನನ್ನೂ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.







