ಪುತ್ತೂರು: 'ಮಾಜಿ ಶಾಸಕಿ ಬೀಡಿ ಕಟ್ಟಲಿ ಎಂಬ ವಾಟ್ಸ್ಆ್ಯಪ್ ಸಂದೇಶ' : ಖಂಡನೆ
ಪುತ್ತೂರು, ಮೇ 25: ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿರುವ ಶಾಸಕಿ ಶಕುಂತಳಾ ಶೆಟ್ಟಿ ಇನ್ನು ಪಕ್ಷ ಕಟ್ಟುವ ಬದಲು ಮನೆಯಲ್ಲಿ ಬೀಡಿ ಕಟ್ಟುವುದು ಒಳಿತು ಎಂದು ವಾಟ್ಸ್ಆ್ಯಪ್ ಮೂಲಕ ಸಂದೇಶ ಹರಿಯಬಿಟ್ಟಿರುವುದು ಖಂಡನೀಯ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಂಯೋಜಕ ಇಸಾಖ್ ಸಾಲ್ಮರ ಹೇಳಿದ್ದಾರೆ.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಇನ್ನು ಪಕ್ಷ ಕಟ್ಟುವ ಬದಲು ಮನೆಯಲ್ಲಿ ಬೀಡಿ ಕಟ್ಟುವುದು ಒಳಿತು ಎಂದು ಪುತ್ತೂರು ನಗರಸಭಾ ಕಾಂಗ್ರೆಸ್ ಸದಸ್ಯ ಎಚ್. ಮಹಮ್ಮದಾಲಿ ಹರಿಯಬಿಟ್ಟಿದ್ದಾರೆ. ಈ ಬಾರಿಯ ಪುತ್ತೂರು ನಗರಸಭಾ ಚುನಾವಣೆಯ ಬಳಿಕ ಬೀಡಿ ಕಟ್ಟುವವರು ಯಾರು ಎಂದು ಮಹಮ್ಮದಾಲಿ ಅವರಿಗೆ ಗೊತ್ತಾಗಲಿದೆ ಎಂದು ಟೀಕಿಸಿದ್ದಾರೆ.
ಚುನಾವಣೆಯಲ್ಲಿ ಪುತ್ತೂರಿನಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಕಾರಣರಾದವರಲ್ಲಿ ಮಹಮ್ಮದಾಲಿ ಕೂಡಾ ಒಬ್ಬರು. ಕೆಪಿಸಿಸಿ ಸೂಚನೆಯಂತೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಟ್ಟದಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಹೈಕಮಾಂಡ್‌ಗೆ ಶಿಫಾರಸ್ಸು ಮಾಡಲಾಗುತ್ತದೆ ಎಂದರು. ಈಗಾಗಲೇ ಪಕ್ಷ ವಿರೋಧಿಗಳ ಕುರಿತು ಮೌಖಿಕವಾಗಿ ಕೆಪಿಸಿಸಿಗೆ ದೂರು ನೀಡಲಾಗಿದೆ. ಲಿಖಿತವಾಗಿ ದೂರು ನೀಡಲು ಬ್ಲಾಕ್ ಕಾಂಗ್ರೆಸ್‌ಗೆ ಸೂಚನೆ ಬಂದಿದೆ ಎಂದರು.
ಮಹಮ್ಮದಾಲಿಯವರು ಶಾಸಕರನ್ನು ಅಪಮಾನಿಸುವ ವಾಟ್ಸಾಪ್ ಸಂದೇಶದಲ್ಲಿ ಕೇವಲ ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿಯವರನ್ನು ಟೀಕಿಸಿರುವುದು ಹೊಟ್ಟೆಪಾಡಿಗಾಗಿ ಬೀಡಿ ಕಟ್ಟಿ ಜೀವನ ನಿರ್ವಹಿಸುವ ಮಹಿಳಾ ಕಾರ್ಮಿಕರನ್ನು ಕೂಡಾ ಅಪಮಾನಿಸಿದ್ದಾರೆ. ಬೀಡಿ ಕಾರ್ಮಿಕ ಸಂಘಟನೆಗಳನ್ನು ಸಂಪರ್ಕಿಸಲಾಗಿದೆ. ಇಂತಹ ನಡವಳಿಕೆಗಳನ್ನು ಮಹಮ್ಮದಾಲಿಯವರು ಮುಂದುವರಿಸಿದರೆ ಪುತ್ತೂರು ನಗರಸಭೆಯ ಮುಂದೆ ಮಹಿಳೆಯರು ಮಹಮ್ಮದಾಲಿಯವರ ವಿರುದ್ಧ ಪ್ರತಿಭಟನೆ ನಡೆಸುವ ದಿನಗಳು ದೂರವಿಲ್ಲ ಎಂದು ಇಸಾಖ್ ಸಾಲ್ಮರ ಹೇಳಿದರು.
ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಪರಾಜಿತ ಶಾಸಕರೇ ಕಾಂಗ್ರೆಸ್ ಪಕ್ಷದ ನಾಯಕತ್ವ ವಹಿಸುವಂತೆ ಕೆಪಿಸಿಸಿ ಸೂಚನೆ ನೀಡಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿಯವರೇ ಪಕ್ಷದ ನಾಯಕರು. ಆದ ಕಾರಣ ಇಲ್ಲಿ ಪಕ್ಷವನ್ನು ಮುನ್ನಡೆಸುವ ಕೆಲಸವನ್ನು ಅವರು ಮಾಡಲಿದ್ದಾರೆ. ಪಕ್ಷದಲ್ಲಿ ಅವರ ಜವಾಬ್ದಾರಿ ಮತ್ತು ಸ್ಥಾನಮಾನಗಳ ಕುರಿತು ಮಹಮ್ಮದಾಲಿಯವರಿಗೆ ಮುಂದೆ ತಿಳಿಯಲಿದೆ. ಪುತ್ತೂರಿನಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕ್ರಮಗಳು ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿಯವರ ಮುಂದಾಳತ್ವದಲ್ಲಿ ನಡೆಯಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಮುಖರಾದ ಚಂದ್ರಶೇಖರ ಪಡೀಲ್ ಮತ್ತು ಗಂಗಾಧರ ರೈ ಉಪಸ್ಥಿತರಿದ್ದರು.







