ಮಕ್ಕಳ ಕಳ್ಳರು ವದಂತಿ: ಪೊಲೀಸ್ ಆಯುಕ್ತರಿಂದ ಕಠಿಣ ಕಾನೂನು ಕ್ರಮದ ಎಚ್ಚರಿಕೆ
ಮಂಗಳೂರು, ಮೇ 25: ರಾಜ್ಯಾದ್ಯಂತ ‘ಮಕ್ಕಳ ಕಳ್ಳರು’ ಕಾರ್ಯಾಚರಿಸುತ್ತಿದ್ದಾರೆ ಎಂಬ ವದಂತಿ ದಟ್ಟವಾಗಿ ಹಬ್ಬಿದೆಯಲ್ಲದೆ, ಮಕ್ಕಳನ್ನು ಹೀನ ಕೃತ್ಯಗಳಿಗೆ ಬಳಸಿಕೊಳ್ಳಲು ಮಕ್ಕಳನ್ನು ಕಳ್ಳರು ಅಪಹರಿಸುತ್ತಾರೆಂದು ಸಾಮಾಜಿಕ ಜಾಲತಾಣ ಮತ್ತು ವಿವಿಧ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದೆ. ಆ ಹಿನ್ನೆಲೆಯಲ್ಲಿ ಅಪರಿಚಿತ ವ್ಯಕ್ತಿಗಳನ್ನು ಮಕ್ಕಳ ಕಳ್ಳರು ಎಂದು ಭಾವಿಸಿ ಹಲ್ಲೆ ಮಾಡುತ್ತಿರುವ ಘಟನೆಗಳೂ ನಡೆದಿರುತ್ತದೆ.
ಆ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟನೆಯೊಂದನ್ನು ಹೊರಡಿಸಿ ‘ಕಮಿಷನರೇಟ್ ವ್ಯಾಪ್ತಿಯಲ್ಲಿ ಇಂತಹ ಕೃತ್ಯ ಮಾಡುವ ವ್ಯಕ್ತಿಗಳ ಬಗ್ಗೆ ಸಂಶಯ ವಿದ್ದಲ್ಲಿ ಮಾಹಿತಿಯನ್ನು ಕೂಡಲೇ ಹತ್ತಿರ ಠಾಣೆಗೆ ಅಥವಾ ಪೊಲೀಸ್ ಕಟ್ರೋಲ್ ರೂಮ್ (100)ಗೆ ಕರೆಮಾಡಿ ತಿಳಿಸಬೇಕು. ಯಾವುದೇ ಕಾರಣಕ್ಕೂ ಕಾನೂನನ್ನು ಕೈಗೆತ್ತಿಕೊಂಡು ಅಪರಿಚಿತ ವ್ಯಕ್ತಿಗಳನ್ನು ಕಂಡರೆ ಮಕ್ಕಳ ಕಳ್ಳರು ಎಂದು ಭಾವಿಸಿ ಕಟ್ಟಿ ಹಾಕುವುದು ಅಥವಾ ಹಲ್ಲೆ ನಡೆಸುವಂತಹ ಪ್ರಕರಣಗಳು ಕಂಡು ಬಂದಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಕಳ್ಳರು ಇದ್ದಾರೆಂಬ ವದಂತಿ ಹಬ್ಬಿಸುವ ವ್ಯಕ್ತಿಗಳ ವಿರುದ್ದ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದ್ದಾರೆ.





