ಉ. ಕೊರಿಯದಿಂದ ತಾಳ್ಮೆಯ ಪ್ರತಿಕ್ರಿಯೆ
ಯಾವಾಗ ಬೇಕಾದರೂ ಮಾತುಕತೆಗೆ ಮುಕ್ತ: ಟ್ರಂಪ್‌ರನ್ನು ಧಾರಾಳವಾಗಿ ಹೊಗಳಿದ ಉತ್ತರ

ಸಿಯೋಲ್, ಮೇ 25: ಮುಂದಿನ ತಿಂಗಳು ಸಿಂಗಾಪುರದಲ್ಲಿ ಅಮೆರಿಕ ಮತ್ತು ಉತ್ತರ ಕೊರಿಯಗಳ ನಡುವೆ ನಡೆಯಲು ನಿಗದಿಯಾಗಿದ್ದ ಶೃಂಗ ಸಮ್ಮೇಳನವನ್ನು ರದ್ದು ಪಡಿಸುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ನಿರ್ಧಾರಕ್ಕೆ ಉತ್ತರ ಕೊರಿಯ ಶುಕ್ರವಾರ ಪ್ರತಿಕ್ರಿಯೆ ನೀಡಿದೆ.
ತನ್ನ ಪರಮಾಣು ಅಸ್ತ್ರಗಳ ಕಾರ್ಯಕ್ರಮದಿಂದ ಉದ್ಭವಿಸಿರುವ ಬಿಕ್ಕಟ್ಟನ್ನು ಪರಿಹರಿಸಲು ಉತ್ತರ ಕೊರಿಯವು ‘ಟ್ರಂಪ್ ಸೂತ್ರ’ವನ್ನು ಎದುರು ನೋಡುತ್ತಿದೆ ಎಂದು ಉತ್ತರ ಕೊರಿಯ ಹೇಳಿದೆ.
ಗುರುವಾರ ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್‌ಗೆ ಪತ್ರವೊಂದನ್ನು ಬರೆದಿರುವ ಟ್ರಂಪ್, ಜೂನ್ 12ರಂದು ಸಿಂಗಾಪುರದಲ್ಲಿ ನಡೆಯಲು ನಿಗದಿಯಾಗಿರುವ ಉಭಯ ದೇಶಗಳ ನಾಯಕರ ನಡುವಿನ ಶೃಂಗ ಸಮ್ಮೇಳನದಿಂದ ತಾನು ಹಿಂದಕ್ಕೆ ಸರಿಯುತ್ತಿರುವುದಾಗಿ ಘೋಷಿಸಿರುವುದನ್ನು ಸ್ಮರಿಸಬಹುದಾಗಿದೆ.
‘‘ದುರದೃಷ್ಟವಶಾತ್, ನಿಮ್ಮ ಇತ್ತೀಚಿನ ಹೇಳಿಕೆಯಲ್ಲಿ ವ್ಯಕ್ತವಾದ ಆಕ್ರೋಶ ಮತ್ತು ಬಹಿರಂಗ ದ್ವೇಷದ ಹಿನ್ನೆಲೆಯಲ್ಲಿ, ಈ ಹಂತದಲ್ಲಿ ಈ ಶೃಂಗ ಸಮ್ಮೇಳನ ನಡೆಸುವುದು ಸರಿಯಲ್ಲ ಎಂದು ನಾನು ಭಾವಿಸಿದ್ದೇನೆ’’ ಎಂದು ಟ್ರಂಪ್ ಬರೆದಿದ್ದಾರೆ.
ಅಮೆರಿಕದ ಅಧಿಕಾರಿಗಳು ನೀಡಿರುವ ಸಂಘರ್ಷಯುತ ಹೇಳಿಕೆಗಳ ಹಿನ್ನೆಲೆಯಲ್ಲಿ, ತಾನು ಶೃಂಗ ಸಮ್ಮೇಳನದಿಂದ ಹಿಂದೆ ಸರಿಯುವುದಾಗಿ ಉತ್ತರ ಕೊರಿಯ ಪದೇ ಪದೇ ಹೇಳಿಕೆಗಳನ್ನು ನೀಡಿದ ಬಳಿಕ ಟ್ರಂಪ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಟ್ರಂಪ್ ಪತ್ರಕ್ಕೆ ಉತ್ತರವಾಗಿ ಶುಕ್ರವಾರ ಉತ್ತರ ಕೊರಿಯದ ಉಪ ವಿದೇಶ ಸಚಿವ ಕಿಮ್ ಕೈ ಗ್ವಾನ್ ಅಮೆರಿಕಕ್ಕೆ ಬರೆದ ಪತ್ರವು ಉದ್ವಿಗ್ನತೆಯನ್ನು ತಣಿಸುವ ಉದ್ದೇಶವನ್ನು ಹೊಂದಿತ್ತು ಹಾಗೂ ವಿಶೇಷವಾಗಿ ಟ್ರಂಪ್‌ರ ಪ್ರಯತ್ನಗಳನ್ನು ಶ್ಲಾಘಿಸುತ್ತಿತ್ತು.
‘‘ಉತ್ತರ ಕೊರಿಯದ ಜೊತೆ ಮಾತುಕತೆ ನಡೆಸುವ ನಿಟ್ಟಿನಲ್ಲಿ, ಈ ಹಿಂದೆ ಅಮೆರಿಕದ ಯಾವ ಅಧ್ಯಕ್ಷರೂ ತೆಗೆದುಕೊಳ್ಳದಂಥ ನಿರ್ಧಾರವನ್ನು ತೆಗೆದುಕೊಂಡಿರುವುದಕ್ಕಾಗಿ ಹಾಗೂ ಶೃಂಗ ಸಮ್ಮೇಳನವನ್ನು ಸಾಧ್ಯವಾಗಿಸಿರುವುದಕ್ಕಾಗಿ ಟ್ರಂಪ್‌ರ ಬಗ್ಗೆ ನಮಗೆ ಮೆಚ್ಚುಗೆಯಿದೆ’’ ಎಂದು ಕಿಮ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಪತ್ರವನ್ನು ಉತ್ತರ ಕೊರಿಯದ ಸರಕಾರಿ ಸುದ್ದಿ ಸಂಸ್ಥೆ ಪ್ರಸಾರ ಮಾಡಿದೆ.
ಯಾವಾಗಲೂ ಮಾತುಕತೆಗೆ ಸಿದ್ಧರಿದ್ದೇವೆ
‘‘ಶೃಂಗ ಸಮ್ಮೇಳನವನ್ನು ರದ್ದುಪಡಿಸುವ ಟ್ರಂಪ್‌ರ ಹಠಾತ್ ಮತ್ತು ಏಕಪಕ್ಷೀಯ ನಿರ್ಧಾರವು ನಮಗೆ ಅನಿರೀಕ್ಷಿತವಾಗಿದೆ ಹಾಗೂ ಇದಕ್ಕೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ’’ ಎಂದು ಕಿಮ್ ಕೈ ಗ್ವಾನ್ ತನ್ನ ಪತ್ರದಲ್ಲಿ ಹೇಳಿದ್ದಾರೆ.
ಅಮೆರಿಕದೊಂದಿಗೆ ಹೊಂದಿರುವ ವಿವಾದಗಳನ್ನು ಯಾವ ವಿಧಾನದಲ್ಲಿ ಹಾಗೂ ಯಾವಾಗ ಬೇಕಾದರೂ ಪರಿಹರಿಸಿಕೊಳ್ಳಲು ಉತ್ತರ ಕೊರಿಯ ತಯಾರಾಗಿದೆ ಎಂದು ಅವರು ತಿಳಿಸಿದ್ದಾರೆ.







