ಕರಾವಳಿಯಲ್ಲಿ ಬಿಜೆಪಿ ಜನರನ್ನು ಪ್ರಚೋದಿಸಿ ಏನೆಲ್ಲಾ ಅನಾಹುತ ಮಾಡಿದೆ ಎಂದು ಗೊತ್ತು : ಕುಮಾರಸ್ವಾಮಿ

ಬೆಂಗಳೂರು, ಮೇ 25: ರೈತರ ಸಾಲಮನ್ನಾ ನೆಪದಲ್ಲಿ ಬಿಎಸ್‌ವೈ ಕರೆ ನೀಡಿರುವ ಇಂತಹ ಬಂದ್‌ಗಳನ್ನು ನಾವು ಬಹಳ ನೋಡಿದ್ದೇವೆ. ಬಿಜೆಪಿ ಕರಾವಳಿಯ ಜನರನ್ನು ಪ್ರಚೋದಿಸಿ ಏನೆಲ್ಲಾ ಅನಾಹುತಗಳನ್ನು ಮಾಡಿದ್ದಾರೆಂದು ಗೊತ್ತಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ಬಳಿಕ ವಿಪಕ್ಷ ನಾಯಕ ಬಿಎಸ್‌ವೈ ಸಭಾತ್ಯಾಗಕ್ಕೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಬಾಯಿಚಪಲಕ್ಕಾಗಿ ಮಾತನಾಡಿದ್ದು, ರಂಗಭೂಮಿ ನಟರಿಗಿಂತ ತಾವೇನು ಕಡಿಮೆ ಇಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆಂದು ಟೀಕಿಸಿದರು.
ವಿಶ್ವಾತ ಮತಯಾಚನೆ ವೇಳೆ ಉತ್ತರ ನೀಡಲು ಅವಕಾಶ ನೀಡದೆ ಸಭಾತ್ಯಾಗ ಮಾಡುವ ಮೂಲಕ ಪಲಾಯನ ಮಾಡಿದ್ದಾರೆ. ಅಲ್ಲದೆ, ನನ್ನ ಹಾಗೂ ನಮ್ಮ ಕುಟುಂಬದ ವಿರುದ್ಧ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಬಿಎಸ್‌ವೈ ಅವರ ಇತಿಹಾಸ ದೇಶದ ಚರಿತ್ರೆಯಲ್ಲಿದೆ. ಆದರೆ, ನಾನು ಅವರ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ ಎಂದು ತಿರುಗೇಟು ನೀಡಿದರು.
ಜನಪ್ರಿಯ ಕಾರ್ಯಕ್ರಮಗಳ ಮುಂದುವರಿಕೆ: ಹಿಂದಿನ ಸರಕಾರದ ಜನಪ್ರಿಯ ಕಾರ್ಯಕ್ರಮಗಳನ್ನು ಮುಂದುವರಿಸಲಾಗುವುದು. ರಾಜ್ಯದ ಎಲ್ಲ ವರ್ಗದ ಜನರ ರಕ್ಷಣೆಗೆ ಸರಕಾರ ಬದ್ಧ. 5 ವರ್ಷಗಳ ಕಾಲ ಸುಭದ್ರ ಆಡಳಿತ ನೀಡಲಿದ್ದೇವೆ ಎಂದ ಅವರು, ನನಗೆ ಯಾವುದೇ ಜಾತಿ ಇಲ್ಲ. ಅಭಿವೃದ್ಧಿಗೆ ಆದ್ಯತೆ ನೀಡೋಣ ಎಂದರು.







