ಅತೀ ಎತ್ತರದ ಆರು ಪರ್ವತ ಏರಿದ ವಿಶ್ವದ ಕಿರಿಯ ಪರ್ವತಾರೋಹಿ: ಅರ್ಜುನ್ ವಾಜಪೇಯಿ ಹೊಸ ದಾಖಲೆ

ಕಠ್ಮಂಡು, ಮೇ 25: ವಿಶ್ವದ ಮೂರನೇ ಅತೀ ಎತ್ತರದ ಪರ್ವತವಾಗಿರುವ ಕಾಂಚನಗಂಗಾ ಶಿಖರವನ್ನು ಏರುವ ಮೂಲಕ 24ರ ಹರೆಯದ ಭಾರತದ ಪರ್ವತಾರೋಹಿ ಅರ್ಜುನ್ ವಾಜಪೇಯಿ 8,000 ಮೀ.ಗೂ ಹೆಚ್ಚು ಎತ್ತರವಿರುವ ಆರು ಪರ್ವತಗಳನ್ನು ಏರಿದ ವಿಶ್ವದ ಅತೀ ಕಿರಿಯ ಪರ್ವತಾರೋಹಿ ಎಂಬ ದಾಖಲೆ ನಿರ್ಮಿಸಿದ್ದಾರೆ.
ನೋಯ್ಡಾ ಮೂಲದ ಅರ್ಜುನ್ ವಾಜಪೇಯಿ ಮೇ 20ರಂದು ಭಾರತೀಯ ಕಾಲಮಾನ ಪೂರ್ವಾಹ್ನ 8:05 ಗಂಟೆಗೆ 8,586 ಮೀಟರ್ ಎತ್ತರ ಕಾಂಚನ್‌ಗಂಗಾ ಶಿಖರದ ತುದಿ ತಲುಪಿದ್ದಾರೆ. ಆದರೆ ಪ್ರತಿಕೂಲ ಹವಾಮಾನದ ಕಾರಣ ಮೂರು ದಿನ ಕೆಳಗಿಳಿಯಲಾಗದೆ , ಮೇ 24ರ ಬೆಳಿಗ್ಗೆ ಅಲ್ಲಿಂದ ಕೆಳಗಿಳಿದು ಮೂಲ ಶಿಬಿರ ತಲುಪಿದ್ದಾರೆ ಎಂದು ಮೂಲಗಳು ತಿಳಿಸಿವೆ. 16ನೇ ವಯಸ್ಸಿನಲ್ಲಿ , 2010ರಲ್ಲಿ ವೌಂಟ್ ಎವರೆಸ್ಟ್ ಪರ್ವತ ಏರಿದ್ದ ಅರ್ಜುನ್ ವಾಜಪೇಯಿ, ಈ ಸಾಧನೆ ಮಾಡಿದ್ದ ಮೂರನೇ ಅತ್ಯಂತ ಕಿರಿಯ ವ್ಯಕ್ತಿ ಎನಿಸಿಕೊಂಡಿದ್ದರು. ಕಳೆದ ಎಪ್ರಿಲ್ 26ರಂದು 5,400 ಮೀಟರ್ ಎತ್ತರದಲ್ಲಿ ನೆಲೆಯಾಗಿರುವ ಮೂಲ ಶಿಬಿರದಿಂದ ಕಾಂಚನ್‌ಗಂಗಾ ಶಿಖರದತ್ತ ಪ್ರಯಾಣ ಬೆಳೆಸಿದ್ದರು. ‘ಮೌಂಟೆನ್ ಡ್ಯು’ ಸಂಸ್ಥೆಯ ‘ ಸವಾಲು ಸ್ವೀಕರಿಸುವ ಭಾರತೀಯರು’ ಎಂಬ ಅಭಿಯಾನದಡಿ ಆರಂಭವಾಗಿದ್ದ ಈ ಪರ್ವತಾರೋಹಣದಲ್ಲಿ ಶೆರ್ಪಾಗಳ ತಂಡ ಹಾಗೂ ಸಹ ಪರ್ವತಾರೋಹಿಗಳ ತಂಡದ ಸಹಕಾರದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ವಾಜಪೇಯಿ ತಿಳಿಸಿದ್ದಾರೆ.
ಕಾಂಚನ್‌ಗಂಗಾ ಶಿಖರ ಏರುವ ತನ್ನ ಎರಡನೇ ಪ್ರಯತ್ನದಲ್ಲಿ ವಾಜಪೇಯಿ ಯಶಸ್ಸು ಸಾಧಿಸಿದ್ದಾರೆ. ಕಳೆದ ವರ್ಷ 6,400 ಮೀಟರ್ ಏರಿ ಶಿಬಿರ 2ನ್ನು ತಲುಪಿದ್ದರೂ ಅಲ್ಲಿಂದ ಮುಂದುವರಿಯಲು ಸಾಧ್ಯವಾಗದೆ ವಾಪಸಾಗಿದ್ದರು. 10ನೇ ವಯಸ್ಸಿನಲ್ಲಿ ಪರ್ವತಾರೋಹಣ ಆರಂಭಿಸಿದ್ದ ವಾಜಪೇಯಿ, 2010ರಲ್ಲಿ ವೌಂಟ್ ಎವರೆಸ್ಟ್(8,848 ಮೀಟರ್), 2011ರಲ್ಲಿ ವೌಂಟ್ ಮನಾಸ್ಲೂ (8,163 ಮೀಟರ್) ಮತ್ತು ಮೌಂಟ್ ಲೋಟ್ಸೆ(8,516 ಮೀಟರ್), 2016ರಲ್ಲಿ ಮೌಂಟ್ ಮಕಾಲು (8,486 ಮೀಟರ್) ಮತ್ತು ಮೌಂಟ್ ಚೊ ಒಯು (8,201 ಮೀಟರ್) ಶಿಖರವನ್ನು ಹತ್ತಿದ್ದಾರೆ ಎಂದು ಪರ್ವತಾರೋಹಿಗಳ ದಾಖಲೆಯನ್ನು ಸಂಗ್ರಹಿಸಿಡುವ ‘ಹಿಮಾಲಯನ್ ಡಾಟಾಬೇಸ್’ನ ಮಾಹಿತಿಯಲ್ಲಿ ತಿಳಿಸಲಾಗಿದೆ. ವಿಶ್ವದಲ್ಲಿರುವ 8,000 ಮೀಟರ್ ಎತ್ತರದ ಎಲ್ಲಾ 14 ಪರ್ವತಗಳನ್ನೂ ಏರುವುದು ತನ್ನ ಗುರಿಯಾಗಿದೆ ಎಂದು ಅರ್ಜುನ್ ವಾಜಪೇಯಿ ತಿಳಿಸಿದ್ದಾರೆ.







