ಕಳ್ಳರೆಂದು ಶಂಕಿಸಿ ಠಾಣೆಗೆ ಕರೆತಂದಿದ್ದ ಸಾರ್ವಜನಿಕರನ್ನು ರಕ್ಷಿಸಲಾಗಿದೆ: ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್
ಬೆಂಗಳೂರು, ಮೇ 25: ಇಲ್ಲಿಯವರೆಗೆ 15 ಜನರನ್ನು ಮಕ್ಕಳ ಕಳ್ಳರು ಎಂದು ಸಾರ್ವಜನಿಕರು ಹಿಡಿದುಕೊಟ್ಟಿದ್ದು ಅವರೆಲ್ಲರನ್ನೂ ರಕ್ಷಣೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುನೀಲ್‌ಕುಮಾರ್ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಕ್ಕಳ ಕಳ್ಳರಿದ್ದಾರೆಂಬ ವದಂತಿ ನಗರದಲ್ಲಿ ಹಬ್ಬಿದೆ. ಆದರೆ, ಸಾರ್ವಜನಿಕರು ಮಕ್ಕಳ ಕಳ್ಳರೆಂದು ಹೇಳಿ ಹಿಡಿದುಕೊಟ್ಟವರನ್ನು ವಿಚಾರಿಸಿದಾಗ ಅವರೆಲ್ಲರೂ ಮಕ್ಕಳ ಕಳ್ಳರು ಅಲ್ಲವೆಂಬ ಅಂಶ ಬೆಳಕಿಗೆ ಬಂದಿದೆ. ಹೀಗಾಗಿ, ಸಾರ್ವಜನಿಕರು ಅಮಾಯಕರನ್ನು ಮಕ್ಕಳ ಕಳ್ಳರೆಂದು ವದಂತಿ ಹಬ್ಬಿಸಿ ಹಲ್ಲೆ ಮಾಡಬಾರದೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಎರಡು ದಿನಗಳ ಹಿಂದೆ ಚಾಮರಾಜಪೇಟೆ ಠಾಣಾ ವ್ಯಾಪ್ತಿಯಲ್ಲಿ ಕಾಲುರಾಮ್ ಬಚ್ಚನ್ ಎಂಬಾತನನ್ನು ಥಳಿಸಿ ಕೊಲೆ ಮಾಡಲಾಗಿದೆ. ಕಾಟನ್‌ಪೇಟೆ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ವ್ಯಕ್ತಿಗಳನ್ನು ಮಕ್ಕಳ ಕಳ್ಳರು ಎಂದು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ, ವಿಚಾರಣೆ ನಡೆಸಿದಾಗ ಅವರು ಯಾರೂ ಮಕ್ಕಳ ಕಳ್ಳರು ಅಲ್ಲ ಎನ್ನುವುದು ತಿಳಿದು ಬಂದಿದೆ ಎಂದು ತಿಳಿಸಿದರು.
ಯಾವುದೇ ಮಕ್ಕಳ ಕಳ್ಳರ ಗುಂಪು ನಗರಕ್ಕೆ ಕಾಲಿಟ್ಟಿಲ್ಲ. ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದ ಅವರು, ವಿನಾಕಾರಣ ವಾಟ್ಸ್ಯಾಪ್ ಸಂದೇಶಗಳ ರವಾನೆಯಿಂದ ನಾಗರಿಕರಲ್ಲಿ ಆತಂಕ ಉಂಟಾಗುತ್ತಿದೆ. ಹೀಗಾಗಿ, ಸುಳ್ಳು ವದಂತಿಗಳನ್ನು ಹಬ್ಬಿಸುವ ಸಂದೇಶಗಳನ್ನು ರವಾನಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.







