ಸರಕಾರ ಆಸಕ್ತಿ ತೋರಿದರೆ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧ: ವಿಶುಕುಮಾರ್
ಬೆಂಗಳೂರು, ಮೇ 25: ರಾಜ್ಯದಲ್ಲಿ ಜಾರಿಗೆ ಬಂದಿರುವ ಹೊಸ ಸರಕಾರ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಸಕ್ತಿ ತೋರಿಸಿದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯನಿರ್ವಹಿಸಲಿದೆ ಎಂದು ಇಲಾಖೆಯ ನಿರ್ದೇಶಕ ವಿಶುಕುಮಾರ್ ತಿಳಿಸಿದರು.
ಶುಕ್ರವಾರ ಕನ್ನಡ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ವಿಶ್ವ ಕನ್ನಡ ಸಮ್ಮೇಳನ ನಡೆಸಲು ಹೆಚ್ಚು ಆಸಕ್ತಿ ತೋರಲಿಲ್ಲ. ಆದರೆ, ಈಗಿನ ಹೊಸ ಸರಕಾರ ಆಸಕ್ತಿ ತೋರಿದರೆ ಇಲಾಖೆ ಆ ಸಂಬಂಧ ಕಾರ್ಯ ನಿರ್ವಹಿಸಲಿದೆ ಎಂದರು.
ಸಂಸ ಬಯಲು ರಂಗ ಮಂದಿರದಲ್ಲಿ ಅನಗತ್ಯ ವ್ಯಕ್ತಿಗಳು ಅಸಭ್ಯ ರೀತಿಯಲ್ಲಿ ವರ್ತಿಸುತ್ತಿದ್ದ ಕಾರಣ ಅಲ್ಲಿನ ಗೇಟುಗಳಿಗೆ ಬೀಗ ಹಾಕಲಾಗಿದೆ. ಇನ್ನು ಮುಂದೆ ರವೀಂದ್ರ ಕಲಾಕ್ಷೇತ್ರ ಹಾಗೂ ನಯನ ಸಭಾಂಗಣದಲ್ಲಿ ಕಾರ್ಯಕ್ರಮಗಳು ನಡೆಯುವ ಸಂದರ್ಭದಲ್ಲಿ ಗೇಟುಗಳನ್ನು ತೆಗೆಯಲಾಗುವುದು ಎಂದು ಅವರು ಹೇಳಿದರು.
ಇ-ಆಫೀಸ್ ಸಂಬಂಧ ಕಳೆದ 3ವರ್ಷಗಳಿಂದ ಹೊರಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಂತ್ರಜ್ಞಾನ ಸಿಬ್ಬಂದಿಯನ್ನು ಕೆಲಸದಿಂದ ತೆಗೆದಿರುವುದರ ಕುರಿತು ಪ್ರತಿಕ್ರಿಯಿಸಿದ ಅವರು, ಇ- ತಂತ್ರಜ್ಞಾನ ಸಿಬ್ಬಂದಿಯನ್ನು ಕೇವಲ 6 ತಿಂಗಳಿನಿಂದ 1 ವರ್ಷಕ್ಕೆ ಮಾತ್ರ ನೇಮಿಸಲಾಗಿತ್ತು. ಆದರೆ, ಅವರನ್ನು ಈ ಹಿಂದಿನ ನಿರ್ದೇಶಕರು 3 ವರ್ಷ ಮುಂದುವರೆಸಿದ್ದರು. ಆ ಹುದ್ದೆಗಳು ಇಲಾಖೆಯಲ್ಲಿ ಇಲ್ಲದಿರುವ ಕಾರಣ ಅವರನ್ನು ಕೆಲಸದಿಂದ ತೆಗೆಯಲಾಗಿದೆ ಎಂದು ಅವರು ಹೇಳಿದರು.







