ಪಿಎಫ್‌ಗೆ ಶೇ.8.55 ಬಡ್ಡಿದರ : ಸರಕಾರದ ಸೂಚನೆ

ಹೊಸದಿಲ್ಲಿ, ಮೇ 25: ಉದ್ಯೋಗಿಗಳ ಭವಿಷ್ಯನಿಧಿ (ಪ್ರಾವಿಡೆಂಟ್ ಫಂಡ್) ಮೇಲೆ 2017-18ರ ಸಾಲಿನಲ್ಲಿ ಶೇ.8.55 ಬಡ್ಡಿದರವನ್ನು ನಿಗದಿಗೊಳಿಸುವಂತೆ ಸರಕಾರ ಸೂಚಿಸಿದೆ. ಕಳೆದ ಐದು ವರ್ಷಗಳಲ್ಲಿಯೇ ಪಿಎಫ್ ಮೇಲೆ ನಿಗದಿಯಾಗಿರುವ ಅತ್ಯಂತ ಕಡಿಮೆ ಬಡ್ಡಿದರ ಇದಾಗಿದೆ. ಪಿಎಫ್ ಬಡ್ಡಿದರವನ್ನು ಶೇ.8.55ಕ್ಕೆ ನಿಗದಿಗೊಳಿಸುವ ಶಿಫಾರಸಿಗೆ ಕೇಂದ್ರ ಸರಕಾರ ಅನುಮೋದನೆ ನೀಡಿರುವುದಾಗಿ ಕಾರ್ಮಿಕ ಸಚಿವಾಲಯ ತಿಳಿಸಿದೆ .
ಈ ಕುರಿತು ಇಪಿಎಫ್‌ಒ(ಉದ್ಯೋಗಿಗಳ ಭವಿಷ್ಯನಿಧಿ ಕಚೇರಿ) ಕಚೇರಿಯು ತನ್ನ 120ಕ್ಕೂ ಹೆಚ್ಚಿನ ಕ್ಷೇತ್ರ ಅಧಿಕಾರಿಗಳಿಗೆ ಸೂಚನೆ ರವಾನಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ ಪಿಎಫ್ ಮೇಲೆ ಶೇ.8.55 ಬಡ್ಡಿ ದರವನ್ನು ನಿಗದಿಗೊಳಿಸುವ ಸಲಹೆಯನ್ನು ವಿತ್ತ ಸಚಿವಾಲಯ ಅಂಗೀಕರಿಸಿತ್ತು. 2018ರ ಫೆ.21ರಂದು ಕೇಂದ್ರದ ಕಾರ್ಮಿಕ ಸಚಿವರ ನೇತೃತ್ವದಲ್ಲಿ ನಡೆದಿದ್ದ ಇಪಿಎಫ್‌ಒ ಆಡಳಿತ ಮಂಡಳಿ ಸಭೆಯಲ್ಲಿ ಕಳೆದ ಆರ್ಥಿಕ ವರ್ಷಕ್ಕೆ ಶೇ.8.55 ಬಡ್ಡಿದರ ನಿಗದಿಪಡಿಸಲು ನಿರ್ಧರಿಸಲಾಗಿತ್ತು. ಬಡ್ಡಿದರದ ಬಗ್ಗೆ ಆಡಳಿತ ಮಂಡಳಿ ಸಭೆಯ ನಿರ್ಧಾರವನ್ನು ಕಾರ್ಮಿಕ ಸಚಿವಾಲಯವು ವಿತ್ತ ಸಚಿವಾಲಯದ ಅಂಗೀಕಾರಕ್ಕೆ ಕಳುಹಿಸಿತ್ತು. ಆದರೆ ಕರ್ನಾಟಕದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಇದನ್ನು ಜಾರಿ ಮಾಡಿರಲಿಲ್ಲ.
2016-17ರ ಆರ್ಥಿಕ ವರ್ಷದಲ್ಲಿ ಇಪಿಎಫ್‌ಒ ಶೇ.8.66 ಬಡ್ಡಿದರ ನಿಗದಿಗೊಳಿಸಿದ್ದರೆ, 2015-16ರಲ್ಲಿ ಶೇ.8.8 ಬಡ್ಡಿದರ, 2014-15ರಲ್ಲಿ ಶೇ.8.75, 2013-14ರಲ್ಲಿ ಶೇ.8.75 ಬಡ್ಡಿದರ ನಿಗದಿಯಾಗಿತ್ತು. 2012-13ರಲ್ಲಿ ಇಪಿಎಫ್ ಮೇಲೆ ಶೇ.8.5ರಷ್ಟು ಬಡ್ಡಿದರ ನಿಗದಿಯಾಗಿತ್ತು. ಕಳೆದ ಐದು ವರ್ಷಕ್ಕೆ ಹೋಲಿಸಿದರೆ 2017-18ರ ಬಡ್ಡಿದರ ಅತ್ಯಂತ ಕಡಿಮೆಯಾಗಿದೆ.





