ಆರ್‌ಆರ್‌ನಗರ ಚುನಾವಣೆ : ನಾಳೆಯಿಂದ ನಿಷೇಧಾಜ್ಞೆ ಜಾರಿ
ಬೆಂಗಳೂರು, ಮೇ 25: ಮುಂದೂಡಲಾಗಿದ್ದ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣೆ ಮೇ 28 ರಂದು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮತದಾನದ ಪ್ರಕ್ರಿಯೆಯ 48 ಗಂಟೆಗಳ ಮೊದಲೇ ಕ್ಷೇತ್ರದಾದ್ಯಂತ ಸಿಆರ್‌ಪಿಸಿ ಕಲಂ 144 ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಮೇ 28 ರಂದು ಮತದಾನ ನಡೆದು, ಮೇ 31 ರಂದು ಮತ ಎಣಿಕೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮತದಾನ ಪ್ರಕ್ರಿಯೆಯನ್ನು ಸುಸೂತ್ರವಾಗಿ ನಡೆಸುವ ಸಲುವಾಗಿ ಮತದಾನ ಮುಗಿಯುವ ಅವಧಿಯ ಹಿಂದಿನ 48 ಗಂಟೆಗಳು ಹಾಗೂ ಮತದಾನ ಮುಗಿದ ನಂತರದ 24 ಗಂಟೆಗಳ ಅವಧಿಯಲ್ಲಿ ಕ್ಷೇತ್ರದಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಕಾನೂನು ಬಾಹಿರ ಗುಂಪುಗಾರಿಕೆ ಮತ್ತು ಸಾರ್ವಜನಿಕ ಸಭೆಯನ್ನು ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಹಾಗೂ ಅಪರ ಜಿಲ್ಲಾ ದಂಡಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ನಿಷೇದಾಜ್ಞೆ ಅನ್ವಯ ಮತದಾನ ಕೇಂದ್ರಗಳಿಗೆ ಮತ ಹಾಕಲು ಬರುವ ಮತದಾರರು ಹೊರತುಪಡಿಸಿ ಐದು ಜನರ ಮೇಲ್ಪಟ್ಟ ಗುಂಪುಗಾರಿಕೆ ಮಾಡುವಂತಿಲ್ಲ. ಯಾವುದೇ ಸಂಘಟನೆ, ರಾಜಕೀಯ ಪಕ್ಷ, ಧಾರ್ಮಿಕ ಪಂಗಡಗಳು ಮೆರವಣಿಗೆ ಹಾಗೂ ಪ್ರತಿಭಟನೆ ನಡೆಸಲು ಅವಕಾಶವಿಲ್ಲ. ಶಸ್ತ್ರ, ಕುಡುಗೋಲು, ಖಡ್ಗ, ಚೂರಿ, ಕೋಲು ಅಥವಾ ದೇಹಕ್ಕೆ ಅಪಾಯ ಮಾಡುವ ಮಾರಾಕಾಸ್ತ್ರಗಳನ್ನು ಬಳಸಬಾರದು. ಯಾವುದೇ ವಿನಾಶಕಾರಿ ವಸ್ತು ಅಥವಾ ಸ್ಪೋಟಕ ವಸ್ತು ತೆಗೆದುಕೊಂಡು ಹೋಗಬಾರದು.
ಕಲ್ಲು ಅಥವಾ ಎಸೆಯುವ ವಸ್ತು ಅಥವಾ ವಸ್ತುಗಳನ್ನು ಎಸೆಯುವುದು ಅಥವಾ ಚಲಿಸುವ ಅಸ್ತ್ರಗಳನ್ನು ತಯಾರಿಸುವುದು ನಿಷೇಧಿಸಿದೆ. ಮಾರಕಾಸ್ತ್ರ, ಸ್ಪೋಟಕ ವಸ್ತುಗಳು, ಬಂದೂಕುಗಳನ್ನು ಹೊಂದಿದ್ದಲ್ಲಿ ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಭಾಷಣ ಮಾಡುವುದು, ಪ್ರಚೋದನಾಕಾರಿ ಮಾತನಾಡುವುದು ನಿಷೇಧಿಸಲಾಗಿದೆ ಎಂದು ಪ್ರಕಟನೆ ಎಚ್ಚರಿಕೆ ನೀಡಿದೆ.







