ಲಾರಿ ಸಹಿತ 6 ಲಕ್ಷ ಮೌಲ್ಯದ ಬೀಟೆ ನಾಟ ವಶ

ಶಿವಮೊಗ್ಗ, ಮೇ 25: ಖಚಿತ ವರ್ತಮಾನದ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಕಾನೂನುಬಾಹಿರವಾಗಿ ಕೊಂಡೊಯ್ಯುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಬೀಟೆ ನಾಟಗಳನ್ನು ಲಾರಿ ಸಮೇತ ವಶಕ್ಕೆ ಪಡೆದಿರುವ ಘಟನೆ ಶುಕ್ರವಾರ ಬೆಳಗ್ಗೆ ಜಿಲ್ಲೆಯ ಹೊಸನಗರ ತಾಲೂಕಿನ ಕೆ. ಹುಣಸವಳ್ಳಿ ಸಮೀಪ ನಡೆದಿದೆ.
ಲಾರಿಯು ಶಿಕಾರಿಪುರದೆಡೆಗೆ ಸಾಗುತ್ತಿತ್ತು. ಈ ಕುರಿತಂತೆ ಮಾಹಿತಿ ಅರಿತ ಗುಸ್ತಿನಲ್ಲಿದ್ದ ಅರಣ್ಯ ಇಲಾಖೆ ತಂಡವು ತಕ್ಷಣವೇ ಲಾರಿಯನ್ನು ಬೆನ್ನತ್ತಿದೆ. ಈ ವೇಳೆ ಮರಗಳ್ಳರು ಲಾರಿಯನ್ನು ಕೆ. ಹುಣಸವಳ್ಳಿ ಗ್ರಾಮದ ಬಳಿ ನಿಲ್ಲಿಸಿ ಪರಾರಿಯಾಗಿದ್ದಾರೆ ಎಂದು ಅರಣ್ಯ ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ಲಾರಿಯಲ್ಲಿ ಸುಮಾರು 80 ಅಡಿಗಳಷ್ಟು ಸುತ್ತಳತ್ತೆಯ ಬೀಟೆ ನಾಟ ಸಾಗಾಣೆ ಮಾಡುತ್ತಿದ್ದುದು ಪತ್ತೆಯಾಗಿದ್ದು, ಇದರ ಮೌಲ್ಯ ಸುಮಾರು 6 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ. ದಾಳಿಯಲ್ಲಿ ಉಪ ವಲಯ ಅರಣ್ಯಾಧಿಕಾರಿ ದೊಡ್ಡಮನಿ, ಅರಣ್ಯ ರಕ್ಷಕ ಮನೋಜ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಹೊಸನಗರ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಶೋಧಕ್ಕೆ ಕ್ರಮಕೈಗೊಳ್ಳಲಾಗಿದೆ.





