ಪ್ಲಾಸ್ಟಿಕ್ ಕಸ ವಿಂಗಡಣೆಯ ಯಂತ್ರದ ಹೊಸ ಮಾದರಿ

ಶಿರ್ವ, ಮೇ 26: ಹೆಚ್ಚುತ್ತಿರುವ ನಗರೀಕರಣದಿಂದ ಕಸ ವಿಂಗಡಣೆ ಹಾಗೂ ಘನತ್ಯಾಜ್ಯದಲ್ಲಿ ಪ್ಲಾಸ್ಟಿಕ್ ಕಸಗಳ ವಿಲೆವಾರಿಗೆ ಸಂಬಂಧಿಸಿದ ಸಮಸ್ಯೆಗೆ ಪರಿಹಾರ ಎಂಬಂತೆ ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಪ್ಲಾಸ್ಟಿಕ್ ಕಸವಿಂಗಡಣೆ ಯಂತ್ರದ ಹೊಸ ಮಾದರಿಯೊಂದನ್ನು ಸಿದ್ಧಪಡಿಸಿದ್ದಾರೆ.
ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥ ಡಾ.ಬಾಲಚಂದ್ರ ಆಚಾರ್ ಮಾರ್ಗದರ್ಶನದಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಯಶಸ್ವಿ ಶೆಣೈ, ಪೂಜಾ ಶೆಣೈ, ವಿಜೇತಾ ಜೈನ್ ಮತ್ತು ಸೊನಾಲಿ ಈ ಯಂತ್ರವನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ಯಂತ್ರವು ಇಂಡಕ್ಟಿವ್ ಹಾಗೂ ಕೆಪಾಸಿಟಿವ್ ಸೆನ್ಸರ್ ತಂತ್ರಜ್ಞಾನವನ್ನು ಬಳಸಿ ಕೊಂಡು ಲೋಹ, ಗಾಜು ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನು ಒಟ್ಟೂ ಕಸದಿಂದ ಬೆೀರ್ಪಡಿಸುತ್ತದೆ.
ಇಂಡಕ್ಟಿವ್ ಸೆನ್ಸರ್ ಲೋಹದ ವಸ್ತುಗಳನ್ನು ಪ್ರತ್ಯೇಕಿಸಿದರೆ, ಕೆಪಾಸಿಟಿವ್ ಸೆನ್ಸರ್ ಗಾಜು ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನು ಒಟ್ಟೂ ಕಸದಿಂದ ಪ್ರತ್ಯೇಕಿಸುತ್ತದೆ. ಇದಲ್ಲದೇ ಕಸದ ತೊಟ್ಟಿ ತುಂಬಿದಾಗ ಜಿಎಸ್ಸೆಮ್ ತಂತ್ರಜ್ಞಾನದ ಸಹಾಯದಿಂದ ಪಾಲಿಕೆಗೆ ತನ್ನಿಂದ ತಾನೇ ಮಾಹಿತಿ ರವಾನೆಯಾಗುವ ವಿಶೇಷತೆಯನ್ನೂ ಈ ಯಂತ್ರ ಒಳಗೊಂಡಿದೆ.