ಜಿಲ್ಲಾಡಳಿತದಿಂದ ರೈತರ ಕೃಷಿ ಚಟುವಟಿಕೆಗೆ ಅಗತ್ಯ ಸಿದ್ಧತೆ: ಚಿಕ್ಕಮಗಳೂರು ಡಿಸಿ

ಚಿಕ್ಕಮಗಳೂರು, ಮೇ 26: ವಾಯುಬಾರ ಕುಸಿತದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಲ್ಲಿ ಜಿಲ್ಲೆಯ ಮಲೆನಾಡು ಹಾಗೂ ಬಯಲುಸೀಮೆ ತಾಲೂಕು ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದ್ದು, ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆಗಳು ಭರದಿಂದ ಸಾಗಿವೆ. ಜಿಲ್ಲಾಡಳಿತ ರೈತರ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಬೇಕಾಗಿರುವ ರಸಗೊಬ್ಬರ, ಬಿತ್ತನೆ ಬೀಜಗಳ ಪೂರೈಕೆಗೆ ಅಗತ್ಯವಾಗಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದ್ದಾರೆ.
ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜೂನ್ ತಿಂಗಳ ಆರಂಭದಲ್ಲಿ ಮುಂಗಾರು ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದ್ದು, ಕಳೆದ ಒಂದು ತಿಂಗಳಲ್ಲಿ ವಾಯುಬಾರ ಕುಸಿತದ ಪರಿಣಾಮ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಧಾರಾಕಾರ ಮಳೆಯಾಗಿದೆ. ಇದರಿಂದಾಗಿ ಜಿಲ್ಲೆಯಾದ್ಯಂತ ಜನ, ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ನೀರಿನ ಅಭಾವದ ಗಂಭೀರ ಪ್ರಕರಣಗಳು ವರದಿಯಾಗಿಲ್ಲ. ಉತ್ತಮ ಮಳೆಯಿಂದಾಗಿ ಜಿಲ್ಲೆಯಾದ್ಯಂತ ರೈತರು ಕೃಷಿ ಚಟುವಟಿಕೆಗಳತ್ತ ಮುಖಮಾಡಿದ್ದು, ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ರೈತರಿಗೆ ಅಗತ್ಯವಾಗಿ ಬೇಕಾಗಿರುವ ಬಿತ್ತನೆ ಬೀಜ ಹಾಗೂ ಗೊಬ್ಬರಗಳ ಪೂರೈಕೆಗೆ ಜಿಲ್ಲಾಡಳಿತದ ವತಿಯಿಂದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ಜಿಲ್ಲೆಯ ವಿವಿಧ ಭಾಗಗಳಲ್ಲಿ ಭೂಮಿಯ ಗುಣ ಆಧರಿಸಿ ಕೃಷಿ ಚಟುವಟಿಕೆ ಕೈಗೊಳ್ಳಲು ಕೃಷಿ ಇಲಾಖೆ ಮೂಲಕ ರೈತರಿಗೆ ಸೂಚಿಸಲಾಗುತ್ತಿದ್ದು, ಮಣ್ಣಿನ ಗುಣಕ್ಕಾನುಸಾರವಾಗಿ ಬೆಳೆ ಬೆಳೆಯಲು ರೈತರನ್ನು ಪ್ರೋತ್ಸಾಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಅಗತ್ಯ ಬಿತ್ತನೆ ಬೀಜಗಳನ್ನು ಆಯಾ ತಾಲೂಕು ವ್ಯಾಪ್ತಿಯ ಹೋಬಳಿ ಕೇಂದ್ರಗಳಲ್ಲಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಶೇಖರಣೆ ಮಾಡಲಾಗಿದೆ. ಅಲ್ಲದೇ ಗೊಬ್ಬರ ಕೊರತೆಯನ್ನು ನೀಗಿಸುವ ಸಲುವಾಗಿ ಈಗಾಗಲೇ ಅಗತ್ಯವಿರುವಷ್ಟು ಗೊಬ್ಬರ ಸಂಗ್ರಹ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಕಳೆದ ಒಂದು ತಿಂಗಳಲ್ಲಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗಿದ್ದು, ಈ ವೇಳೆ ಆಸ್ತಿಪಾಸ್ತಿ ನಷ್ಟ, ಬೆಳೆ ಹಾನಿ, ಪ್ರಾಣ ಹಾನಿ ಬಗ್ಗೆ ವರದಿ ಪಡೆಯಲಾಗಿದೆ. ಈ ಸಂಬಂಧ ಪರಿಶೀಲಿಸಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದ ಅವರು, ರೈತರು ಬೆಳೆಯುವ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಸೂಚಿಸಲಾಗಿದ್ದು, ಜೂನ್ ಹಾಗೂ ಜುಲೈ ತಿಂಗಳಲ್ಲಿ ಬೆಳೆ ವಿಮೆ ಮಾಡಿಸಲು ಕಾಲಾವಕಾಶ ನೀಡಲಾಗಿದೆ. ರೈತರಿಗೆ ಕೃಷಿ ಚಟುವಟಿಕೆ ನಡೆಸಲು ಅಗತ್ಯವಾಗಿ ಬೇಕಾಗಿರುವ ಪಹಣಿ ಸೇರಿದಂತೆ ಸರಕಾರಿ ದಾಖಲೆಗಳನ್ನು ಸಮಯಕ್ಕೆ ಸರಿಯಾಗಿ ನೀಡುವಂತೆ ಆಯಾ ತಾಲೂಕುಗಳ ತಹಶೀಲ್ದಾರ್ ಈಗಾಗಲೇ ಸೂಚನೆ ನೀಡಲಾಗಿದೆ. ಮಳೆಯಿಂದ ಜನ ಜಾನುವಾರುಗಳಿಗೆ ತೊಂದರೆ ಆಗದಂತೆ ಮುಂಜಾಗ್ರತ ಕ್ರಮವಹಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಚಿಕ್ಕಮಗಳೂರು-ಸಕಲೇಶಪುರ ರೈಲು ಯೋಜನೆಗೆ ಭೂಸ್ವಾದೀನ ಪ್ರಕ್ರಿಯೆ ಆರಂಭ:
ಚಿಕ್ಕಮಗಳೂರು ಸಕಲೇಶಪುರ ರೈಲ್ವೇ ಯೋಜನೆಗೆ ಭೂ ಸ್ವಾಧೀನ ಪ್ರಕ್ರಿಯೇ ನಡೆದಿದೆ. ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ಸುಮಾರು 131 ಎಕರೆ ಜಮೀನನ್ನು ಭೂ ಸ್ವಾಧೀನ ಮಾಡಲಾಗಿದೆ. ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ರೈತರೊಂದಿಗೆ ಅನೇಕ ಬಾರಿ ಸಭೆ ನಡೆಸಿ ರೈತರ ಬೇಡಿಕೆಗಳನ್ನು ಆಲಿಸಿದ್ದೇವೆ. ರೈತರು ಹೆಚ್ಚಿನ ಪರಿಹಾರ, ಪರ್ಯಾಯ ಜಮೀನು ಅಥವಾ ರೈಲ್ವೇ ಇಲಾಖೆಯಲ್ಲಿ ಕೆಲಸ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಹೊಸ ಭೂಸ್ವಾಧೀನ ಕಾಯ್ದೆ 2013ರ ಅನ್ವಯ ಸರ್ಕಾರದ ನಿರ್ದೇಶನದಂತೆ ಭೂಮಿಗೆ ಪರಿಹಾರ ನೀಡಲಾಗುವುದು. ಸ್ವಂತ ಜಮೀನು ಶೇ.50ರಷ್ಟು ಕಳೆದುಕೊಳ್ಳುತ್ತಾರೋ ಅವರಿಗೆ ಜಮೀನು ಪರಿಹಾರದ ಜೊತೆಗೆ ಐದು ಲಕ್ಷ ರು. ನೀಡಲಾಗುವುದು. ಮನೆ ಇದ್ದಲ್ಲಿ ಇಂದಿರಾ ಆವಾಸ್ ಯೋಜನೆ ಮನೆಯ ಮೌಲ್ಯದಲ್ಲಿ ಮೊತ್ತ ನೀಡಲಾಗುವುದು. ಜಮೀನಿನಲ್ಲಿರುವ ಕಟ್ಟಡ, ಕೊಳವೆ ಬಾವಿ, ಬೆಲೆ ಬಾಳುವ ಮರಗಳೂ ಸೆರಿದಂತೆ ಇತರ ಆಸ್ತಿಪಾಸ್ತಿಗಳಿದ್ದಲ್ಲಿ ಅವುಗಳಿಗೆ ನಿಗದಿತ ಮೌಲ್ಯದ ಪರಿಹಾರ ನೀಡಲಾಗುವುದು ಜಿಲ್ಲಾಧಿಕಾರಿ ಶ್ರೀ ರಂಗಯ್ಯ ತಿಳಿಸಿದರು.
ರೈತರ ಬೇಡಿಕೆಯಂತೆ ರೈಲ್ವೇ ಇಲಾಖೆಯಲ್ಲಿ ಕೆಲಸ ನೀಡಲು ಸಾಧ್ಯವಿಲ್ಲ. ರೈಲ್ವೇ ಯೋಜನೆಯಲ್ಲಿ ಉದ್ಯೋಗ ಸೃಷ್ಟಿಯಾದರೇ ಮಾತ್ರ ರೈಲ್ವೇ ಇಲಾಖೆಯಲ್ಲಿ ಉದ್ಯೋಗ ನೀಡಲು ಸಾಧ್ಯ. ಆದರೆ ಇಲ್ಲಿ ರೈಲ್ವೇ ಸಂಪರ್ಕ ಕಲ್ಪಿಸುವುದರಿಂದ ಯಾವುದೇ ಹುದ್ದೆ ಸೃಷ್ಟಿಯಾಗುವುದಿಲ್ಲ. ರೈಲ್ವೇ ಯೋಜನೆಯಿಂದ ಭೂಮಿ ಕಳೆದುಕೊಳ್ಳುತ್ತಿರುವ ರೈತರು ಹೆಚ್ಚಿನ ಪರಿಹಾರದ ಬೇಡಿಕೆ ಇಟ್ಟಿದ್ದಾರೆ. ಕಾನೂನಾತ್ಮಕವಾಗಿ ಪರಿಹಾರ ನೀಡಲು ಸಾಧ್ಯವೆಂದು ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ. ರೈತರು ಇದಕ್ಕೆ ಒಪ್ಪದಿದ್ದಲ್ಲಿ ಕಾನೂನಿನ ಆಡಿಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗುದು ಎಂದು ಅವರು ತಿಳಿಸಿದರು.
ಮಳಲೂರು ಏತ ನೀರಾವರಿ ಯೋಜನೆ ಸಂಬಂಧ ರೈತರ ಸಭೆ ನಡೆಸಲಾಗಿದೆ. ನೂರು ಎಕರೆ ಪ್ರದೇಶದ ಭೂಮಿಯನ್ನು ನೇರವಾಗಿ ಜಿಲ್ಲಾಧಿಕಾರಿ ಖರೀದಿ ಮಾಡಲು ಅವಕಾಶವಿದೆ. ಭೂಮಿ ಖರೀದಿಗೆ ರೈತರ ಸಭೆ ನಡೆಸಲಾಗಿದೆ. ರೈತರು ಹೆಚ್ಚಿನ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದಾರೆ. ಏತ ನೀರಾವರಿ ಯೋಜನೆಯಿಂದ ರೈತರ ಜಮೀನುಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಸಿಗಲಿದೆ. ಇದರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಬಗ್ಗೆಯೂ ಮನವರಿಕೆ ಮಾಡಿ ಕಾಮಗಾರಿ ಪ್ರಾರಂಭಕ್ಕೆ ಅವಕಾಶ ನೀಡುವಂತೆ ಮನವಿ ಮಾಡಲಾಗಿದೆ. ಕೆಲ ರೈತರು ಹೆಚ್ಚಿನ ಪರಿಹಾರ ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ಶೇ.70ರಷ್ಟು ರೈತರು ಯೋಜನೆ ಕೈಗೊಳ್ಳಲು ಒಪ್ಪಿಗೆ ಪತ್ರವನ್ನು ನೀಡಿದ್ದಾರೆ. ಶೇ.30ರಷ್ಟು ರೈತರು ಒಪ್ಪಿಗೆ ಪತ್ರ ನೀಡದೆ ಹೆಚ್ಚಿನ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ. ಸರಕಾರ ನೀಡುವ ಪರಿಹಾರಕ್ಕೆ ರೈತರು ಒಪ್ಪಿಗೆ ಸೂಚಿಸಿದ ಪಕ್ಷದಲ್ಲಿ ಕಾನೂನಾತ್ಮಕವಾಗಿ ಭೂ ಸ್ವಾಧೀನ ಪಡೆಸಿಕೊಂಡು ನ್ಯಾಯಲಯದಲ್ಲಿ ದಾವೆ ಹೂಡಿ ಕಾಮಗಾರಿಗೆ ಚಾಲನೆ ನೀಡಲಾಗುವುದು.
- ಎಂ.ಕೆ.ಶ್ರೀರಂಗಯ್ಯ, ಜಿಲ್ಲಾಧಿಕಾರಿ







