ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಕ್ಷದ ಹೀನಾಯ ಸೋಲಿಗೆ ಜಿಲ್ಲಾಧ್ಯಕ್ಷರೇ ಕಾರಣ: ಕಾಂಗ್ರೆಸ್ ಮುಖಂಡ ಆನಂದ್ ಆರೋಪ

ಚಿಕ್ಕಮಗಳೂರು, ಮೇ 26: ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಜನಪ್ರಿಯತೆ ಹೊಂದಿರುವ ಕಾಂಗ್ರೆಸ್ ಪಕ್ಷ ಪದೇ ಪದೇ ಚುನಾವಣೆಗಳಲ್ಲಿ ಮುಗ್ಗರಿಸುತ್ತಿದ್ದು, ಪಕ್ಷದ ಹೀನಾಯ ಸೋಲಿಗೆ ಸೂಕ್ತ ಚುನಾವಣಾ ತಂತ್ರಗಾರಿಕೆ ಮಾಡದೇ ಪಕ್ಷ ಹಾಗೂ ಪಕ್ಷದ ವರಿಷ್ಠರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೇ ದಾರಿ ತಪ್ಪಿಸುತ್ತಿದ್ದಾರೆಂದು ಜಿಲ್ಲಾ ಕಾಂಗ್ರೆಸ್ ಸೇವಾದಳ ವಿಭಾಗದ ಮಾಜಿ ಅಧ್ಯಕ್ಷ ಹಾಗೂ ಹಾಲಿ ಡಿಸಿಸಿ ಸದಸ್ಯರೂ ಆಗಿರುವ ಕೆ.ಆನಂದ್ ಕುಮಾರ್ ಆರೋಪಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಯಲ್ಲಿ ಕಾಂಗ್ರೆಸ್ ಅತ್ಯಂತ ಜನಪ್ರಿಯ ಪಕ್ಷವಾಗಿದೆ. ಆದರೂ ಪಕ್ಷದ ಹೀನಾಯ ಸೋಲಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯ್‍ಕುಮಾರ್ ಸೂಕ್ತ ತಂತ್ರಗಾರಿಕೆ ಮಾಡದಿರುವುದು ಕಾರಣವಾಗಿದೆ. 2013ರಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಪಡೆದ ನಂತರ ನಡೆದ ನಗರಸಭಾ ಚುನಾವಣೆ, ಪಪಂ, ಜಿಪಂ, ತಾಪಂ, ಗ್ರಾಪಂ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸ್ಥಿತಿಯಲ್ಲಿ ಸೋಲು ಕಾಣುವಂತಾಗಿದೆ. ಇದರಿಂದಾಗಿ ಪಕ್ಷ ನಿಷ್ಠಾವಂತ ಕಾರ್ಯಕರ್ತರು ಅಸಮದಾನಗೊಂಡಿದ್ದು, ತಮ್ಮ ನೋವವನ್ನು ಯಾರಲ್ಲಿ ಹೇಳಬೇಕೆಂದೂ ಗೊತ್ತಾಗದೇ ಪರಿತಪಿಸುವಂತಾಗಿದೆ ಎಂದು ಅವರು ತಿಳಿಸಿದ್ದಾರೆ.
2014ರಲ್ಲಿ ಲೋಕಸಭಾ ಚುನಾವಣೆ ಹಾಗೂ 2016ರಲ್ಲಿ ವಿಧಾನಪರಿಷತ್ ಚುನಾವಣೆ ನಡೆದಿದ್ದು, ಈ ಚುನಾವಣೆಗಳಲ್ಲೂ ಪಕ್ಷ ಹೀನಾಯವಾಗಿ ಸೋತಿದ್ದರೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಸೋಲಿನ ಜವಾಬ್ದಾರಿ ಹೊತ್ತುಕೊಂಡು ಪಕ್ಷದ ಹಿನ್ನೆಡೆಗೆ ಕಾರಣ ಏನೆಂದು ಹುಡುಕಿ ಪಕ್ಷವನ್ನು ಸದೃಢಗೊಳಿಸಲು ಮುಂದಾಗಲಿಲ್ಲ. ಜಿಲ್ಲೆಯಲ್ಲಿ ಡಾ.ವಿಜಯಕುಮಾರ್ ಅವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುವ ಅವಧಿಯಲ್ಲಿ ನಡೆದ ಎ.ಪಿ.ಎಂ.ಸಿ, ಡಿ.ಸಿ.ಸಿ ಬ್ಯಾಂಕ್ ಮುಂತಾದ ಚುನಾವಣೆಗಳಲ್ಲಿ ಪಕ್ಷದ ಪ್ರತಿನಿಧಿಗಳು ಹೆಚ್ಚಾಗಿ ಆಯ್ಕೆಯಾದರೂ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿರುವುದು ಸಾರ್ವಜನಿಕರಲ್ಲಿ ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಇತರ ಪಕ್ಷಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರಾ ಎಂಬ ಅನುಮಾನ ಮೂಡಿಸಿದೆ ಎಂದು ಆರೋಪಿಸಿರುವ ಅವರು, 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಜಿಲ್ಲೆಯಲ್ಲಿ ಅತ್ಯಂತ ಸಮರ್ಥ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದರೂ ಪಕ್ಷದ ಮುಖಂಡರುಗಳು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಚುನಾವಣಾ ಕಾರ್ಯತಂತ್ರಗಳನ್ನು ರೂಪಿಸದೇ ಪಕ್ಷದ ಅಭ್ಯರ್ಥಿಗಳ ಸೋಲಿಗೆ ಕಾರಣರಾಗಿದ್ದಾರೆ ಎಂದು ಅವರು ದೂರಿದ್ದಾರೆ.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜ್ಯದಲ್ಲೇ ಉತ್ತಮ ಅಭ್ಯರ್ಥಿಗಳಲ್ಲೊಬ್ಬರಾಗಿದ್ದರು. ಮಾಜಿ ಸಂಸದರೂ ಆಗಿರುವ ಬಿ.ಎಲ್.ಶಂಕರ್ ಸೇರಿದಂತೆ ಮಾಜಿ ಸಚಿವೆ ಮೋಟಮ್ಮ, ಮಾಜಿ ಶಾಸಕ ಎಸ್.ಎಂ.ನಾಗರಾಜ್ ಹಾಗೂ ಕಡೂರು ಆನಂದ್ ಜನಪ್ರಿಯರಾಗಿದ್ದರೂ ಅವರುಗಳನ್ನು ಗೆಲ್ಲಿಸಿಕೊಂಡು ಬರುವಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ವಿಫಲಾರಾಗಿದ್ದಾರೆ. ಕೇವಲ ನೆಪ ಮಾತ್ರಕ್ಕೆ ಮಾತ್ರ ಇವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದು, ಜಿಲ್ಲೆಯ ಹಲವು ಸಂಘ ಸಂಸ್ಥೆಗಳಲ್ಲೂ ಅಧಿಕಾರ ದಾಹದಿಂದ ಅಧ್ಯಕ್ಷರಾಗಿದ್ದಾರೆ. ಎಂ.ಇ.ಎಸ್, ಜಿಲ್ಲಾ ಒಕ್ಕಲಿಗರ ಸಂಘ, ವೈದ್ಯರ ಸಂಘ, ಬೆಳೆಗಾರರ ಬ್ಯಾಂಕ್, ಪದವೀಧರರ ಸಹಕಾರಿ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ವಿಜಯ್‍ಕುಮಾರ್ ಅಧ್ಯಕ್ಷರು ಹಾಗೂ ಪದಾಧಿಕಾರಿಯಾಗಿದ್ದಾರೆ. ಆದರೆ ಇವರ ಈ ಸ್ಥಾನಮಾನಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಉಪಯೋಗವಾಗಿಲ್ಲ ಎಂಬುವುದು ಚುನಾವಣಾ ಫಲಿತಾಂಶಗಳೇ ಸಾರಿ ಹೇಳುತ್ತಿವೆ. ವೃತ್ತಿಯಲ್ಲಿ ವೈದ್ಯರಾಗಿರುವ ಇವರಿಗೆ ಕೆಲವು ಸಾಂದರ್ಭಿಕ ಒತ್ತಡಗಳೂ ಇದ್ದು, ಇವರು ಹಾಗೂ ಇವರ ಹಿಂಬಾಲಕರು ನಿಷ್ಠುರ ನಿಲುವುಗಳನ್ನು ತೆಗೆದುಕೊಂಡು ಪಕ್ಷದ ಸಂಘಟನೆ ಬಲಿಷ್ಠಗೊಳಿಸದೇ ಒಳ ಒಪ್ಪಂದಗಳನ್ನು ಮಾಡಿಕೊಂಡು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಹೀನಾಯ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆಂದು ಆನಂದ್ ಟೀಕಿಸಿದ್ದಾರೆ.
ರಾಜ್ಯ ನಾಯಕರುಗಳು ಮತ್ತು ಪಕ್ಷದ ಉಸ್ತುವಾರಿಗಳ ಮೆಚ್ಚುಗೆ ಪಡೆಯಲು ಕಾರ್ಯಕರ್ತರನ್ನು ಅವರ ಬಳಿ ಸುಳಿಯದ ಹಾಗೇ ಮಾಡಿರುವ ನಡವಳಿಕೆಯನ್ನು ಕಾರ್ಯಕರ್ತರು ಹಲವು ಬಾರಿ ವರಿಷ್ಠರ ಗಮನಕ್ಕೆ ತಂದರೂ ಈ ವಿಚಾರವನ್ನು ಲಘುವಾಗಿ ಪರಿಗಣಿಸಿ ಮತ್ತೆ ಮತ್ತೆ ಪಕ್ಷಕ್ಕೆ ಜಿಲ್ಲೆಯಲ್ಲಿ ಸೋಲಾಗುವಂತೆ ಮಾಡಲಾಗುತ್ತಿದೆ. ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿದ್ದು, ಇವರ ಅಧ್ಯಕ್ಷತೆಯಲ್ಲಿ ಚುನಾವಣೆಗೆ ಹೋಗುವುದು ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಹಾನಿ ತಂದುಕೊಡುತ್ತದೆ. ಇಷ್ಟೆಲ್ಲಾ ಅನಾಹುತಗಳು ಹಾಗೂ ನಷ್ಟ ಕಾಂಗ್ರೆಸ್ ಪಕ್ಷಕ್ಕೆ ಆದರೂ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಇವರು ಮುಂದಾಗದಿರುವುದು ವಿಪರ್ಯಾಸ. ಆದ್ದರಿಂದ ಪಕ್ಷವನ್ನು ಹೀನಾಯ ಸ್ಥಿತಿಗೆ ತಲುಪಿಸಿರುವ ಡಾ.ವಿಜಯಕುಮಾರ್ ರವರನ್ನು ಜಿಲ್ಲಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ಪಕ್ಷಕ್ಕೆ ಎಲ್ಲಾ ಸಮಯದಲ್ಲಿ ದುಡಿಯುವ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ನೇಮಿಸಿ ಜಿಲ್ಲಾ ಕಾಂಗ್ರೆಸ್ ಪಕ್ಷವನ್ನು ಉಳಿಸಬೇಕೆಂದು ಅವರು ಪಕ್ಷದ ರಾಜ್ಯ ನಾಯಕರುಗಳಲ್ಲಿ ಮನವಿ ಮಾಡಿದ್ದಾರೆ.
--------------------------------------------------------------------------
-----------------------------------------------------------------------------------------
ಪೊಟೊ: ಕ್ಯಾ[ಪ್ಸನ್
ಪೋಟೋ 25ಟಿಕೆಆರ್2
ತರೀಕೆರೆ ಪಟ್ಟಣದ ನೀರು ಶುದ್ದಿಕರಣ ಘಟಕಕ್ಕೆ ಪುರಸಭೆ ಅಧ್ಯಕ್ಷೆ ಟಿ.ಎಲ್.ಅಶ್ವಿನಿ, ಮುಖ್ಯಾಧಿಕಾರಿ ಮಹೇಶ್, ಸದಸ್ಯ ಟಿ,.ಎಸ್.ರಮೆಶ್, ಇಂಜಿನಿಯರ್ ಬಿಂದು ಭೇಟಿ ನೀಡಿ ಪರೀಶಿಲನೆ ನಡೆಸಿದರು.
---------------------------------







