ನಿಟ್ಟೆ: ‘ಸೌಂದರ್ಯದ ಪ್ಲಾಸ್ಟಿಕ್ ಶಸ್ತ್ರ ಚಿಕಿತ್ಸೆಯಲ್ಲಿ ಇತ್ತೀಚಿನ ಪ್ರವೃತ್ತಿಗಳು’ ಕಾರ್ಯಕ್ರಮ

ಉಳ್ಳಾಲ, ಮೇ 26 : ಪ್ಲಾಸ್ಟಿಕ್ ಸರ್ಜರಿ ಕ್ಷೇತ್ರದಲ್ಲಿ ಇಂದು ನಮ್ಮ ದೇಶವೂ ಉತ್ತಮ ಸಾಧನೆ ಮಾಡುತ್ತಿದೆ. ಹಿಂದೆ ವಿದೇಶಗಳಲ್ಲೇ ಸೂಕ್ತ ತರಬೇತಿಯನ್ನು ಪಡೆಯಬೇಕಿತ್ತು. ಆದರೆ ಇಂದು ದೇಶದಲ್ಲಿಯೂ ಕ್ಷೇತ್ರದ ಬೆಳವಣಿಗೆ ಆಗುವ ಮೂಲಕ ವೈದ್ಯರಿಗೆ ಉತ್ತಮ ತರಬೇತಿಯ ಜತೆಗೆ ವಿಪುಲ ಅವಕಾಶಗಳು ಇವೆ ಎಂದು ಚೆನ್ನೈಯ ಅಪೋಲೋ ಆಸ್ಪತ್ರೆಯ ಹಿರಿಯ ಕನ್ಸಲ್ಟೆಂಟ್ ಕಾಸ್ಮೆಟಿಕ್ ಸರ್ಜನ್ ಡಾ ಕೆ. ರಾಮಚಂದ್ರನ್ ಅಭಿಪ್ರಾಯಪಟ್ಟರು.
ಅವರು ನಿಟ್ಟೆ ವಿಶ್ವವಿದ್ಯಾನಿಲಯ ಕ್ಯಾಂಪಸ್‌ನಲ್ಲಿ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಜನರಲ್ ಸರ್ಜರಿ ಎಂಡ್ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಆಶ್ರಯದಲ್ಲಿ ‘ಸೌಂದರ್ಯದ ಪ್ಲಾಸ್ಟಿಕ್ ಶಸ್ತ್ರ ಚಿಕಿತ್ಸೆಯಲ್ಲಿ ಇತ್ತೀಚಿನ ಪ್ರವೃತ್ತಿಗಳು’ವಿಚಾರದಲ್ಲಿ ಶನಿವಾರ ನಡೆದ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಯೋಜನೆ ರೂಪಿಸುವುದು, ಪರಿಪೂರ್ಣತೆ ಹಾಗೂ ಗುರಿಯನ್ನು ಹೊಂದುವ ಮೂಲಕ ಯಾವುದೇ ಕ್ಷೇತ್ರದಲ್ಲಿ ಜಯಿಸಬಹುದು. ಇಂತಹ ಗುಣವನ್ನು ಹೊಂದಿ, ಸರಿಯಾದ ಮಾರ್ಗದರ್ಶಕರು ದೊರೆತ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ. ಕಾರ್ಯಗಾರ ಹಮ್ಮಿಕೊಳ್ಳುವ ಮೂಲಕ ಪ್ಲಾಸ್ಟಿಕ್ ಸರ್ಜರಿಯ ಮೂಲ ವಿಚಾರದ ಕುರಿತು ಚರ್ಚೆ ನಡೆಯಬೇಕಿದೆ. ಈ ಮೂಲಕ ಕಾರ್ಯಗಾರದಲ್ಲಿ ಭಾಗವಹಿಸಿರುವ ದಂತ ವೈದ್ಯರು ಹಾಗೂ ವೈದ್ಯರಲ್ಲಿನ ದೃಷ್ಟಿಕೋನದ ಬದಲಾವಣೆ ಜತೆಗೆ ಭವಿಷ್ಯದ ಬದಲಾವಣೆಯೂ ಸಾಧ್ಯವಾಗುವ ವಿಶ್ವಾಸ ಇದೆ ಎಂದರು.
ಕ್ಷೇಮ ಡೀನ್ ಡಾ.ಪಿ.ಯಸ್. ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಕೆ.ಎಂ.ಸಿ. ಮಣಿಪಾಲದ ಪ್ಲಾಸ್ಟಿಕ್ ಸರ್ಜರಿ ವಿಭಾಗ ಮುಖ್ಯಸ್ಥ ಡಾ ಎನ್.ಸಿ. ಶ್ರೀಕುಮಾರ್, ಮಂಗಳೂರಿನ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ ಪ್ಲಾಸ್ಟಿಕ್ ಸರ್ಜರಿ ವಿಭಾಗ ಮುಖ್ಯಸ್ಥ ಪ್ರೊ ದಿನೇಶ್ ಕದಮ್, ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಜನರಲ್ ಸರ್ಜರಿ ವಿಭಾಗದ ವಿಭಾಗ ಮುಖ್ಯಸ್ಥ ಡಾ ರಾಜಶೇಖರ್ ಮೋಹನ್ , ಕ್ಷೇಮ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ ಶಿವಕುಮಾರ್ ಹಿರೇಮಠ್ ಉಪಸ್ಥಿತರಿದ್ದರು.
ಕನ್ಸಲ್ಟೆಂಟ್ ಪ್ಲಾಸ್ಟಿಕ್ ಸರ್ಜನ್ ಡಾ ನಿಖಿಲ್ ಶೆಟ್ಟಿ ಸ್ವಾಗತಿಸಿದರು. ಕನ್ಸಲ್ಟೆಂಟ್ ಡಾ ಕಾರ್ತಿಕ್ ವಿಶ್ವನಾಥ್ ವಂದಿಸಿದರು.







