ರೈಲು ನಿಲ್ದಾಣಗಳಲ್ಲಿ ಇನ್ನು ಮುಂದೆ ಸ್ಯಾನಿಟರಿ ಪ್ಯಾಡ್, ಕಾಂಡೋಮ್ ಲಭ್ಯ

ಹೊಸದಿಲ್ಲಿ, ಮೇ 26: ಇನ್ನುಮುಂದೆ ರೈಲು ನಿಲ್ದಾಣದ ಒಳಗೆ ಹಾಗೂ ಹೊರಗಿರುವ ಶೌಚಾಲಯಗಳಲ್ಲಿ ಪ್ರಯಾಣಿಕರಿಗೆ ಮಾತ್ರವಲ್ಲದೆ ರೈಲ್ವೆ ನಿಲ್ದಾಣದ ಸುತ್ತಮುತ್ತ ಇರುವವರಿಗೆ ಕಾಂಡೋಮ್ ಹಾಗೂ ಸ್ಯಾನಿಟರಿ ಪ್ಯಾಡ್‌ಗಳು ಲಭ್ಯವಾಗಲಿವೆ.
ಈ ನೂತನ ಶೌಚಾಲಯ ನೀತಿಗೆ ರೈಲ್ವೆ ಬೋರ್ಡ್ ಇತ್ತೀಚೆಗೆ ಅನುಮೋದನೆ ನೀಡಿದೆ. ರೈಲು ನಿಲ್ದಾಣದ ಒಳಗೆ ಹಾಗೂ ಸುತ್ತಮುತ್ತ ಸೂಕ್ತ ಶೌಚಾಲಯಗಳ ಕೊರತೆ ಇರುವುದರಿಂದ ಸಮೀಪದಲ್ಲಿ ಮುಖ್ಯವಾಗಿ ಸನಿಹದ ಕೊಳಗೇರಿ ಹಾಗೂ ಗ್ರಾಮಗಳಲ್ಲಿ ವಾಸಿಸುವ ಜನರು ಬಯಲು ಶೌಚಾಲಯಕ್ಕೆ ಮೊರೆ ಹೋಗುತ್ತಿರುವುದು ಹಾಗೂ ರೈಲು ನಿಲ್ದಾಣದ ಆವರಣದಲ್ಲಿ ಮೂತ್ರ ಮಾಡುವುದು ಕಂಡು ಬಂದಿದೆ. ಇದರಿಂದ ಉಂಟಾಗುವ ಅನೈರ್ಮಲ್ಯತೆ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ನೀತಿ ಹೇಳಿದೆ.
ಋತುಸ್ರಾವದ ಸಂದರ್ಭ ಸ್ವಚ್ಛತೆ ಕಾಪಾಡುವ ಉತ್ತಮ ಅಭ್ಯಾಸ ಹಾಗೂ ಗರ್ಭ ನಿರೋಧಕಗಳನ್ನು ಬಳಸುವ ಬಗ್ಗೆ ಅರಿವು ಮೂಡಿಸಲು ಸ್ಯಾನಿಟರಿ ಪ್ಯಾಡ್ ಹಾಗೂ ಕಾಂಡೋಮ್‌ಗಳನ್ನು ಒಳಗೊಂಡ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳನ್ನು ರೈಲು ನಿಲ್ದಾಣದ ಆವರಣದಲ್ಲಿ ಅಸ್ತಿತ್ವಕ್ಕೆ ತರಲು ರೈಲ್ವೆ ಮಂಡಳಿ ನಿರ್ಧರಿಸಿದೆ. ಪ್ರತಿ ಸೌಲಭ್ಯ ಮಹಿಳೆಯರಿಗೆ ಕಡಿಮೆ ಬೆಲೆಯ ಸ್ಯಾನಿಟರಿ ಪ್ಯಾಡ್‌ಗಳನ್ನು ಒದಗಿಸುವ , ಅದನ್ನು ಸುಡುವ ಹಾಗೂ ಕಾಂಡೋಮ್‌ಗಳನ್ನು ವಿತರಿಸುವ ಕಿಯೋಸ್ಕೋಗಳನ್ನು ಒಳಗೊಳ್ಳಲಿದೆ ಎಂದು ನೀತಿಯಲ್ಲಿ ಹೇಳಲಾಗಿದೆ.







