ಖಾತೆ ಹಂಚಿಕೆಯಲ್ಲಿ ಸಮಸ್ಯೆ ಉದ್ಭವ: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ಮೇ 26: ಕಾಂಗ್ರೆಸ್‌ನಲ್ಲಿ ಖಾತೆ ಹಂಚಿಕೆ ವಿಚಾರದಲ್ಲಿ ಕೆಲವು ಸಮಸ್ಯೆಗಳು ಉದ್ಭವಿಸಿದ್ದು, ಅವರ ಪಕ್ಷದ ವರಿಷ್ಠರ ಭೇಟಿ ಬಳಿಕ ಎಲ್ಲ ಬಗೆಹರಿಯಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾತೆ ಹಂಚಿಕೆ ವಿಚಾರದಲ್ಲಿರುವ ಸಮಸ್ಯೆಗಳು, ಸರಕಾರವೇ ಬಿದ್ದುಹೋಗುವ ಮಟ್ಟದಲ್ಲಿ ಏನಿಲ್ಲ. ಎಲ್ಲ ಸಮಸ್ಯೆಗಳು ಶೀಘ್ರವೇ ಶಮನವಾಗಲಿದೆ ಎಂದರು.
ಕಾಂಗ್ರೆಸ್ ನಾಯಕರು ಅವರ ಹೈಕಮಾಂಡ್ ಭೇಟಿಗಾಗಿ ಹೊಸದಿಲ್ಲಿಗೆ ತೆರಳಿದ್ದು, ಮಾತುಕತೆ ನಡೆಸುತ್ತಿದ್ದಾರೆ. ಅವರು ತೀರ್ಮಾನ ಕೈಗೊಂಡ ಬಳಿಕ ಮುಂದಿನ ಹಾದಿ ಸುಗಮವಾಗಲಿದೆ ಎಂದು ಕುಮಾರಸ್ವಾಮಿ ಹೇಳಿದರು.
ಸಂಪುಟವನ್ನು ವಿಸ್ತರಣೆ ಮಾಡಿ, ಖಾತೆಗಳನ್ನು ಹಂಚಿಕೆ ಮಾಡಬೇಕಾಗಿದೆ. ಇನ್ನೆರಡು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿದೆ. ರೈತರ ಸಾಲ ಮನ್ನಾ ವಿಚಾರದಲ್ಲಿ ಯಾವುದೇ ಆತುರದ ಅಥವಾ ವಿಳಂಬದ ನಿರ್ಧಾರವನ್ನು ಕೈಗೊಳ್ಳುವುದಿಲ್ಲ. ಅಧಿಕಾರಿಗಳು, ತಜ್ಞರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.





