ಬೆಂಗಳೂರು: ರೋಡ್ ರೋಲರ್ ಹರಿದು ಬಾಲಕ ಮೃತ್ಯು
5 ಲಕ್ಷ ರೂ. ಪರಿಹಾರ ಘೋಷಣೆ

ಬೆಂಗಳೂರು, ಮೇ 26: ಬಿಬಿಎಂಪಿ ರಸ್ತೆ ಕಾಮಗಾರಿ ವೇಳೆ ರೋಡ್ ರೋಲರ್ ಹರಿದು ಬಾಲಕ ಮೃತಪಟ್ಟಿರುವ ದುರ್ಘಟನೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶುಕ್ರವಾರ ಮಧ್ಯಾಹ್ನ ನಗರದ ಹೆಮ್ಮಿಗೇಪುರದಲ್ಲಿ ಈ ದುರ್ಘಟನೆ ನಡೆದಿದ್ದು, 11 ವರ್ಷದ ಮನು ಎಂಬ ಬಾಲಕ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಹೆಮ್ಮಿಗೇಪುರದ ಗಾಣಿಗರ ಪಾಳ್ಯದ ಬಳಿ ರಸ್ತೆಗೆ ಡಾಂಬಾರು ಹಾಕುವ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಸೈಕಲ್ ತುಳಿಯುತ್ತ ಮನು ಬರುವುದನ್ನು ಕಾಣದ ಚಾಲಕ ರೋಡ್ ರೋಲರ್ ಚಲಾಯಿಸಿದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಮೃತ ಮನು, ಚಾಮರಾಜನಗರ ಮೂಲದ ರವಿ ಮತ್ತು ಮಂಜುಳ ದಂಪತಿಯ ಪುತ್ರನಾಗಿದ್ದು, ಗಾಣಿಗರ ಪಾಳ್ಯದ ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ರಜೆ ಇದ್ದರೂ ಶಾಲೆಯ ಕಡೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಸೈಕಲ್ ತೆಗೆದುಕೊಂಡು ಹೋಗಿದ್ದ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಬಿಎಂಪಿ ಸಿಬ್ಬಂದಿ ಮತ್ತು ರಸ್ತೆ ಕಾಮಗಾರಿ ಕಾಂಟ್ರಾಕ್ಟರ್‌ಗಳ ನಿರ್ಲಕ್ಷ್ಯದಿಂದಲೇ ತಮ್ಮ ಮಗ ಮೃತಪಟ್ಟಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.
5 ಲಕ್ಷ ರೂ. ಪರಿಹಾರ ಘೋಷಣೆ
ರೋಡ್ ರೋಲರ್‌ಗೆ ಸಿಲುಕಿ ಮೃತಪಟ್ಟ ಬಾಲಕ ಮನು ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಬಿಬಿಎಂಪಿ ಮೇಯರ್ ಆರ್.ಸಂಪತ್‌ರಾಜ್ ಘೋಷಿಸಿದ್ದಾರೆ.
ಗುತ್ತಿಗೆದಾರರು ಹಾಗೂ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಅನಾಹುತ ಸಂಭವಿಸಿದ್ದು, ಪುತ್ರನ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ದೇವರು ಆ ಕುಟುಂಬಕ್ಕೆ ನೀಡಲಿ ಎಂದು ಕೋರಿದ್ದು, ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮಕೈಗೊಳ್ಳುವಂತೆ ಹಾಗೂ ಮುಂದಿನ ದಿನಗಳಲ್ಲಿ ಇಂತಹ ಅನಾಹುತಗಳು ಸಂಭವಿಸಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.







