ಮಣಿಪಾಲ: ನಾಲ್ಕು ದಿನದ ಮಗುವಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ
ಕೆಎಂಸಿ ವೈದ್ಯರ ಅಪೂರ್ವ ಸಾಧನೆ

ಮಣಿಪಾಲ, ಮೇ 26: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಹೃದಯ ಶಸ್ತ್ರಚಿಕಿತ್ಸಾ ತಜ್ಞರಾದ ಡಾ.ಅರವಿಂದ ಬಿಷ್ಣೋಯ್ ಮತ್ತವರ ತಜ್ಞರ ತಂಡ, ಇತ್ತೀಚೆಗೆ ದೊಡ್ಡ ಅಪಧಮನಿಗಳ ವರ್ಗಾವಣೆಯ ಜನ್ಮಜಾತ ದೋಷವನ್ನು ಸರಿಪಡಿಸಲು ನಾಲ್ಕು ದಿನಗಳ ನವಜಾತ ಶಿಶುವಿಗೆ ಯಶಸ್ವಿ ತೆರೆದ ಹೃದಯ ಶಸ್ತ್ರಚಿಕಿತ್ಸೆ (ಓಪನ್ ಹಾರ್ಟ್ ಸರ್ಜರಿ) ನಡೆಸಿದೆ.
ಶಸ್ತ್ರಚಿಕಿತ್ಸೆಯ ಬಳಿಕ ಮಗು ಉತ್ತಮ ರೀತಿಯಲ್ಲಿ ಚೇತರಿಸಿಕೊಂಡಿದೆ ಎಂದು ಡಾ.ಅರವಿಂದ್ ತಿಳಿಸಿದರು. ಗರ್ಭಾವಸ್ಥೆಯಲ್ಲಿ ನಿಯಮಿತ ಪರೀಕ್ಷೆಯ ಸಂದರ್ಭದಲ್ಲಿ ಆಸ್ಪತ್ರೆಯ ಸ್ತ್ರೀ ರೋಗ ಮತ್ತು ಹೆರಿಗೆ ವಿಭಾಗದ ಮುಖ್ಯಸ್ಥ ರಾದ ಡಾ.ಮುರಳೀಧರ ವಿ.ಪೈ ಅವರು ಭ್ರೂಣದಲ್ಲಿ ಕೆಲವು ನ್ಯೂನತೆಗಳನ್ನು ಪತ್ತೆ ಮಾಡಿದ್ದರು. ಆ ಬಳಿಕ ಹೃದಯ ಮೌಲ್ಯಮಾಪನ ಸಂದರ್ಭದಲ್ಲಿ ಭ್ರೂಣವು ದೊಡ್ಡ ಅಪಧಮನಿಗಳ ವರ್ಗಾವಣೆ ಹೊಂದಿದ ನ್ಯೂನತೆಯನ್ನು ಕಂಡುಕೊಳ್ಳಲಾಯಿತು.
ಮಗುವಿನಲ್ಲಿರುವ ನ್ಯೂನ್ಯತೆಯನ್ನು ಹುಟ್ಟುವುದಕ್ಕೆ ಮೊದಲೇ ಪತ್ತೆ ಹಚ್ಚಿದ್ದರಿಂದ ಮಗು ಜನಿಸುತಿದ್ದಂತೆಯೇ ಕೆಎಂಸಿ ವೈದ್ಯರು ಮುಂದಿನ ಹಂತಕ್ಕೆ ಕಾರ್ಯಪ್ರವೃತ್ತರಾದರು. ಮಗುವಿನ ಪೋಷಕರು ವೈದ್ಯರ ಸಲಹೆಗೆ ಸಮ್ಮತಿ ನೀಡಿದರು. ಹೀಗಾಗಿ ತಾಯಿ ತನ್ನ ಮೊದಲ ಮಗುವಿಗೆ (ಗಂಡು) ಜನ್ಮ ನೀಡಿದರು. ಮಗುವಿನ ಜನನಾನಂತರ ವೈದ್ಯರು ತಕ್ಷಣ ನವಜಾತ ಶಿಶುವನ್ನು ಮಕ್ಕಳ ತೀವ್ರ ನಿಗಾ ಘಟಕಕ್ಕೆ (ಎನ್‌ಸಿಯು) ಸ್ಥಳಾಂತರಿಸಿದರು.
ನವಜಾತ ಶಿಶು ತಜ್ಞರಾದ ಡಾ.ಲೆಸ್ಲಿ ಲೂಯಿಸ್ ಮತ್ತವರ ತಂಡ ಮಗುವಿನ ಆರೈಕೆ ಮಾಇದಾಗ ತಿಳಿದ ಅಂಶವೆಂದರೆ ರಕ್ತದಲ್ಲಿರುವ ಆಮ್ಲಜನಕ ಅಂಶ ಮಗುವಿನಲ್ಲಿ ಕಡಿಮೆ ಇತ್ತು ಹಾಗೂ ಮಗುವಿನ ಚರ್ಮದ ಬಣ್ಣ ನೀಲಿ ಬಣ್ಣಕ್ಕೆ ತಿರುಗುವುದರಲ್ಲಿತ್ತು. ವೈದ್ಯರು ಇದಕ್ಕೆ ತಕ್ಷಣ ಚಿಕಿತ್ಸೆ ಪ್ರಾರಂಭಿಸಿದರು. ಇದೇ ವೇಳೆ ಮಗುವನ್ನು ಶಸ್ತ್ರಚಿಕಿತ್ಸೆಗೆ ಸಜ್ಜುಗೊಳಿಸಲಾಗಿತ್ತು. ಹೃದಯ ಶಸ್ತ್ರಚಿಕಿತ್ಸಾ ತಜ್ಞರ ತಂಡ ನಾಲ್ಕು ದಿನಗಳ ಪುಟಾಣಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಲು ತೀರ್ಮಾಸಿದರು.
ಡಾ.ಅರವಿಂದ್ ಮತ್ತವರ ತಂಡ, ಅರಿವಳಿಕೆ ತಜ್ಞರ ತಂಡದ ಸಹಾಯ ದೊಂದಿಗೆ ಸತತ ಮೂರೂವರೆ ಗಂಟೆಗಳ ಕಾಲ ನಡೆದ ಸಂಕೀರ್ಣ ಶಸ್ತ್ರಚಿಕಿತ್ಸೆ ನಂತರ ಸಾಮಾನ್ಯ ಅಪಧಮನಿಗಳನ್ನು ಬದಲಿಸುವಲ್ಲಿ ಯಶಸ್ವಿಯಾದರು. ಶಸ್ತ್ರಚಿಕಿತ್ಸೆಯ ಬಳಿಕ ಮಗುವಿನ ಚರ್ಮದ ಬಣ್ಣ ಮತ್ತೆ ಗುಲಾಬಿ ಬಣ್ಣಕ್ಕೆ ಮಾರ್ಪಾಟು ಹೊಂದಿತು. ಇದು ಶಸ್ತ್ರಚಿಕಿತ್ಸೆಯ ಯಶಸ್ಸಿಗೆ ದ್ಯೋತಕವಾಗಿತ್ತು.
ಹೆರಿಗೆಯ 9 ದಿನಗಳ ಬಳಿಕ ತಾಯಿ ಮೊದಲ ಬಾರಿಗೆ ತನ್ನ ಕಂದನಿಗೆ ಎದೆ ಹಾಲುನೀಡಿದಳು. ಪಾಲಕರು ಮಗುವನ್ನು 12ನೇ ದಿನ ಮನೆಗೆ ಕರೆದೊಯ್ದರು. ‘ತಮ್ಮ ಮಗು ಶಸ್ತ್ರಚಿಕಿತ್ಸೆಯ ಬಳಿಕ ಸಾಮಾನ್ಯ ಮಗುವಿನಂತಾಗುತ್ತದೆ ಎಂದು ತಿಳಿದಾಗ ಪೋಷಕರ ಕಣ್ಣಲ್ಲಿ ಕಂಡ ಹೊಳಪು ನನಗೆ ಅತೀವ ಸಂತೋಷ ನೀಡಿತು. ಇನ್ನು ಈ ಮಗು ಯಾವುದೇ ಮಗುವಿನಂತೆ ಸಾಮಾನ್ಯ ಜೀವನ ನಡೆಸಬಹುದು.’ ಎಂದು ಡಾ.ಅರವಿಂದ ನುಡಿದರು.
ಆಸ್ಪತ್ರೆಯ ವೈದ್ಯರ ಈ ಸಾಧನೆಗೆ ಅತೀವ ಹರ್ಷ ವ್ಯಕ್ತಪಡಿಸಿದ ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ ಶೆಟ್ಟಿ, ಕೆಎಂಸಿಯಲ್ಲಿ ಈಗ ನವಜಾತ ಶಿಶುಗಳ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಬೇಕಾದ ತಜ್ಞರ ಲಭ್ಯತೆ ಹಾಗೂ ಸೌಲಭ್ಯಗಳು ಇವೆ ಎಂದರು.







