ರಾಜ್ಯದಲ್ಲಿ ವಿಶ್ವಕರ್ಮ ವಿವಿ ಸ್ಥಾಪನೆಯಾಗಲಿ: ಡಾ.ಕಂಬಾರ

ಹೊಸದಿಲ್ಲಿ, ಮೇ 26: ವಿಶ್ವಕ್ಕೆ ಕಲೆಯನ್ನು ಪರಿಚಯಿಸಿದವರು ವಿಶ್ವಕರ್ಮರು. ಇಂದು ವಿಶ್ವದೆಲ್ಲೆಡೆ ವಿಶ್ವಕರ್ಮರ ಶಿಲ್ಪಗಳು ರಾರಾಜಿಸುತ್ತಿವೆ. ವಿಶ್ವಕರ್ಮರ ಶಿಲ್ಪಕಲಾ ವೈಭವವನ್ನು ಮುಂದಿನ ಜನಾಂಗಕ್ಕೆ ತಿಳಿಸಿ, ಉಳಿಸಿ, ಬೆಳೆಸಲು ಕರ್ನಾಟಕದಲ್ಲಿ ವಿಶ್ವಕರ್ಮ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಆಶಯ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಸಂಜೆ ರಾಯಚೂರಿನ ಕಲಾಸಂಕುಲ ಸಂಸ್ಥೆ ವತಿಯಿಂದ ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ನಡೆದ ಕನ್ನಡ ನಾಡುನುಡಿ ಉತ್ಸವ ಉದ್ಘಾಟಿಸಿ ಮಾತನಾಡುತಿದ್ದರು. ವಿಶ್ವಕರ್ಮ ಜನಾಂಗದಲ್ಲಿ ಹುಟ್ಟಿರುವುದಕ್ಕೆ ನನಗೆ ಅತ್ಯಂತ ಹೆಮ್ಮೆ ಇದೆ. ಆಚಾರ ವಿಚಾರ ಸೇರಿ ಎಲ್ಲದರಲ್ಲೂ ವಿಶ್ವಕರ್ಮರು ಅದ್ಭುತ ಮೇಧಾವಿಗಳು ಎಂದು ಕಂಬಾರ ಬಣ್ಣಿಸಿದರು.
ಚಿಕ್ಕಬಳ್ಳಾಪುರದ ನಂದಿ ಜ್ಞಾನಾನಂದ ಆಶ್ರಮದ ಶಿವತ್ಮಾನಂದ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು. ದಿಲ್ಲಿಯ ಪ್ರೇರಣಾ ರಾವ್‌ರಿಂದ ಕಥಕ್ ನೃತ್ಯ ಪ್ರದರ್ಶನ ಮತ್ತು ಎಸ್. ಕುಮಾರ್‌ಸಂಗಡಿಗರಿಂದ ಗೀತಾಗಾಯನ ನಡೆಯಿತು.
ನಾಡಿನ ವಿಶೇಷ ಸಾಧಕರಾದ ರಾಯಚೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಾಣೇಶ್ ಕುಲಕರ್ಣಿ, ಮರ್ಚಟ್‌ಹಾಳ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ವೇತಾ ಕುಲಕರ್ಣಿ, ರಾಜಸ್ಥಾನ್ ಅದಾನಿ ಪವರ್ ಕಾರ್ಪೋರೇಶನ್ ಡಿಜಿಎಂ ಅಣ್ಣಾ ರಾವ್, ಕೋಲಾರ ಜಿಲ್ಲೆಯ ಶಿವಾರಪಟ್ಟಣದ ಶಿಲ್ಪಿಎಸ್.ಎನ್.ಪುರುಷೋತ್ತ ಮಾಚಾರ್ಯ, ಮದಭಾವಿ ಶನೇಶ್ವರ್ ದೇವಸ್ಥಾನದ ಧರ್ಮದರ್ಶಿ ಡಾ. ಮಾರುತಿ ಭಂಡಾರಿ, ಸದಾಶಿವ ಲಕ್ಷ್ಮಣ್ ವಾರಣಾಸಿ, ರಾಜಕುಮಾರ ಸಿದ್ದಪ್ಪ ಕಳ್ಳಿಗುದ್ದಿ, ಶೌಕತ್ ಆಲಿ ಶೇಕ್ ಸಾಬ ಸೌದಾಗರ, ಕಾಶಿನಾಥ್ ಎಸ್. ಅಗಸನಾಳ್, ಲಗಮಣ್ ಮಾರುತಿ ಚೌಗಲೆ, ಶೇಖರ್ ಎಚ್.ಬಹುರೂಪಿ, ಸಂಗಮೇಶ್ ಎಸ್ ಮಾದರ್, ಡಾ.ಸಚಿನ್ ಕುಮಾರ್ ಎಸ್ ಮನುಗುತ್ತಿ ಮತ್ತು ಲಿಂಗರಾಜ್ ಮಲ್ಲಣ್ಣ ಬಡಿಗೇರ್ ಇವರಿಗೆ ರಾಷ್ಟ್ರೀಯ ಮಟ್ಟದ ಭಾರತ ಗೌವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಎಂ.ಜಿ.ಪತ್ತಾರ್ ವಿಜಯಪುರ, ಸುರೇಶ್ ಬಡಿಗೇರ್, ದಿಲ್ಲಿಯ ಎನ್. ಆರ್.ಶ್ರೀನಾಥ್ ಇವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಹೈಕೋರ್ಟ್ ವಕೀಲ ಬಾಬು ಪತ್ತಾರ್, ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯದರ್ಶಿ ವೀರೇಂದ್ರ ಇನಾಂದಾರ್, ದೆಹಲಿ ಜನಕಪುರಿ ಕನ್ನಡ ಸಂಘದ ಅಧ್ಯಕ್ಷ ಎನ್.ಆರ್.ಶ್ರೀನಾಥ್ ಉಪಸ್ಥಿತರಿದ್ದರು. ಉತ್ಸವ ಸಂಘಟ ಮಾರುತಿ ಬಡಿಗೇರ್ ಸ್ವಾಗತಿಸಿದರು.







