ಮಳೆಯ ಅಬ್ಬರಕ್ಕೆ ನೀರಿನಲ್ಲಿ ಕೊಚ್ಚಿ ಹೋದ ವೃದ್ಧ
ಬೆಂಗಳೂರು, ಮೇ 26: ಉದ್ಯಾನನಗರಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಶನಿವಾರವೂ ಮಳೆಯ ಆರ್ಭಟ ಮುಂದುವರೆದಿದ್ದು, ಮಧ್ಯಾಹ್ನದಿಂದಲೇ ಸುರಿದ ಅಬ್ಬರದ ಮಳೆಯ ನೀರಿನಲ್ಲಿ ದಾವಣಗೆರೆ ಜಿಲ್ಲೆಯ ವೃದ್ಧ ಬಪ್ಪ ಕೊಚ್ಚಿ ಹೋದ ಘಟನೆ ನಡೆದಿದೆ.
ಶನಿವಾರ ಮಧ್ಯಾಹ್ನದಿಂದ ಮೋಡ ಮುಸಕಿದ ವಾತಾವರಣದಲ್ಲಿ ಅಲ್ಲಲ್ಲಿ ಚದುರಿದ ಮಳೆಯಾಗಿದೆ. ನಗರದ ಹೊರವಲಯ ನೆಲಮಂಗಲ ಸುತ್ತಮುತ್ತ ಬಿರುಗಾಳಿ ಸಹಿತ ಮಳೆಯಾಗಿದ್ದು, ವಾಹನ ಸವಾರರು, ಪ್ರಯಾಣಿಕರು ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಬೆಂಗಳೂರು ಸೇರಿದಂತೆ ರಾಮನಗರ, ತುಮಕೂರು, ಮಂಗಳೂರು, ದಾವಣಗೆರೆ, ಬೀದರ್ ಮತ್ತು ಕಲಬುರ್ಗಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಚಂಡಮಾರುತದ ಪ್ರಭಾವ ಬೀರುವ ಸಾಧ್ಯತೆಗಳಿವೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಇಲಾಖೆ ಮಾಹಿತಿ ನೀಡಿದೆ.
ಚಂಡಮಾರುತ ಹಿನ್ನೆಲೆಯಲ್ಲಿ ಜನರು ಹೊರಗೆ ಹೋಗದೆ ಮನೆಯಲ್ಲಿ ಇರುವಂತೆ ಮುನ್ನೆಚ್ಚರಿಕೆ ನೀಡಿದೆ. ನಗರದಲ್ಲಿ ಶನಿವಾರ ಗುಡುಗು ಸಹಿತ ಮಳೆ ಆರಂಭವಾಗಿದ್ದು, ಭಾರಿ ಮಿಂಚು, ಸಿಡಿಲು ಇದ್ದು, ಅನಗತ್ಯವಾಗಿ ಜನರು ಹೊರ ಹೋಗದೆ ಮನೆಯಲ್ಲಿ ಉಳಿಯುವಂತೆ ವಿಪ್ಪತ್ತು ನಿರ್ವಹಣಾ ಇಲಾಖೆ ಟ್ವಿಟರ್ ಮೂಲಕ ನಿರ್ದೇಶನ ನೀಡಿದೆ.







