ಉಡುಪಿ: ಮೇ 31ಕ್ಕೆ ಕಲಾವಿದರ ಸಮಾವೇಶ
ಉಡುಪಿ, ಮೇ 26: ಯಕ್ಷಗಾನ ಕಲಾರಂಗ ಕಳೆದ 18 ವರ್ಷಗಳಿಂದ ನಡೆಸಿಕೊಂಡು ಬಂದ ‘ಯಕ್ಷ ಕಲಾವಿದರ ಸಮಾವೇಶ’ವು ಮೇ 31ರಂದು ಗುರುವಾರ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ದಿನಪೂರ್ತಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಬೆಳಗ್ಗೆ 9 ರಿಂದ 11 ರವರೆಗೆ ಡಾ. ಶೈಲಜಾ ನೇತೃತ್ವದಲ್ಲಿ ಕಣ್ಣಿನ ತಪಾಸಣೆ ಮತ್ತು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ವೈದ್ಯರ ತಂಡದಿಂದ ಆರೋಗ್ಯ ತಪಾಸಣೆ ನಡೆಯಲಿದೆ. 11 ರಿಂದ 12:30ರವರೆಗೆ ಯಕ್ಷಗಾನ ಕಲಾ ಸಂವಾದ ಸಂಪನ್ನಗೊಳ್ಳಲಿದೆ.
ಅಪರಾಹ್ನ 2 ರಿಂದ 3 ಗಂಟೆಯವರೆಗೆ ಯಕ್ಷನಿಧಿಯ 19ನೇ ವಾರ್ಷಿಕ ಮಹಾಸಭೆ ಹಾಗೂ 3 ರಿಂದ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರ ಉಪ ಸ್ಥಿತಿಯಲ್ಲಿ ಡಾ. ಜಿ. ಶಂಕರ್ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಕರಾವಳಿಯ ಯಕ್ಷಗಾನ ವೃತ್ತಿ ಮೇಳದ ಸದಸ್ಯ ಕಲಾವಿದರು ಇದರಲ್ಲಿ ಭಾಗವಹಿಸ ಬೇಕೆಂದು ಸಂಸ್ಥೆಯ ಅಧ್ಯಕ್ಷ ಕೆ.ಗಣೇಶ್ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





