ಪ್ರಾಥಮಿಕ ಶಿಕ್ಷಣದಿಂದಲೇ ಕನ್ನಡ ಕಡ್ಡಾಯಗೊಳಿಸಿ: ಡಾ.ಚಿದಾನಂದಗೌಡ

ಬೆಂಗಳೂರು, ಮೇ 26: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಾತುಕತೆ ನಡೆಸಿ 1ರಿಂದ 10ನೆ ತರಗತಿವರೆಗೆ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಕಡ್ಡಾಯಗೊಳಿಸಿದರೆ ಮಕ್ಕಳಲ್ಲಿ ಕನ್ನಡ ಭಾಷೆ ಪ್ರೌಢಿಮೆ ಉಳಿಸಲು ಸಾಧ್ಯವಾಗುತ್ತದೆ ಎಂದು ಕುವೆಂಪು ವಿವಿಯ ನಿವೃತ್ತ ಕುಲಪತಿ ಡಾ.ಚಿದಾನಂದಗೌಡ ಅಭಿಪ್ರಾಯಪಟ್ಟರು.
ಶನಿವಾರ ನಗರದ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ವತಿಯಿಂದ ಆಯೋಜಿಸಿದ್ದ, ಸಾಧಕರೊಡನೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಗಳನ್ನು ಉಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದೊಂದಿಗೆ ಮಾತುಕತೆ ನಡೆಸಬೇಕು ಎಂದರು.
ಕೆಲವೇ ವರ್ಷಗಳಲ್ಲಿ ನಮ್ಮ ಮಾತೃಭಾಷೆ ಕನ್ನಡ ಮೃತಭಾಷೆಯಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಇಂಗ್ಲಿಷ್ ಭಾಷೆಯ ಪ್ರೌಢಿಮೆ ಬೆಳೆಸಿಕೊಳ್ಳಬೇಕು. ಮಾತೃಭಾಷೆಯಲ್ಲಿ ಪ್ರೌಢಿಮೆ ಉಳಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.
ನಾನು ಸುಳ್ಯದ ಚೊಕ್ಕಾಡಿಯಲ್ಲಿ ಜನಿಸಿದೆ. ವಿದ್ವಾನ್ ತಾಳಂಬೆ ಪುಟ್ಟೇಗೌಡ ನಮ್ಮ ತಂದೆ. ನಾನು ಎರಡು ವರ್ಷ ವಯಸ್ಸಿನಲ್ಲಿದ್ದಾಗ ನನ್ನ ತಾಯಿ ತೀರಿಕೊಂಡರು. ನಂತರ ನನ್ನ ಚಿಕ್ಕಮ್ಮ ನನನ್ನು ಸಲುಹಿದರು. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಸುಳ್ಯದಲ್ಲಿ ಮುಗಿಸಿದೆ. ಚಿಕ್ಕಂದಿನಲ್ಲಿ ಯಕ್ಷಗಾನ, ತಾಳಮದ್ದಳೆ ನೋಡುತ್ತಾ ಬೆಳೆದೆ. ಶಾಲಾದಿನಗಳಲ್ಲಿ ಯಕ್ಷಗಾನದಲ್ಲಿ ಪಾತ್ರ ಮಾಡುತ್ತಿದ್ದೆ ಎಂದು ನೆನಪು ಮಾಡಿಕೊಂಡರು.
ಪಿಯುಸಿ ಮಂಗಳೂರಿನಲ್ಲಿ ಮುಗಿಸಿದ ನಂತರ ಬೆಂಗಳೂರಿನ ವಿಶ್ವೇಶ್ವರಯ್ಯ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದ ನಂತರ ಉಪನ್ಯಾಸಕನಾಗಿ ವೃತ್ತಿ ಆರಂಭಿಸಿದೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ ಸೇವೆ ಸಲ್ಲಿಸಿದ ನಾನು, ನಂತರ 1969ರಿಂದ 2002ರವರೆಗೆ ಮೈಸೂರಿನ ಜೆಎಸ್‌ಎಸ್ ಕಾಲೇಜಿನಲ್ಲಿ ಎಲೆಕ್ಟ್ರಿಕ್, ಕಂಪ್ಯೂಟರ್ ವಿಭಾಗದ ಮುಖ್ಯಸ್ಥನಾಗಿ ಸೇವೆ ಸಲ್ಲಿಸಿದೆ. ಈ ಮಧ್ಯೆ ಅಮೆರಿಕಾದ ನಾಸಾದಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದೆ. ನಂತರ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಯಾಗಿ ಸರಕಾರ ನೇಮಿಸಿತು ಎಂದು ಹೇಳಿದರು.
ನಿವೃತ್ತಿ ನಂತರ ಕನ್ನಡ ಪತ್ರಿಕೆಗಳಲ್ಲಿ ಅಂಕಣ ಬರೆಯುತ್ತಿದ್ದೇನೆ. ವ್ಯಕ್ತಿತ್ವ ವಿಕಸನ, ಪುಟಾಣಿಗಳ ವಿಜ್ಞಾನ ಪದ್ಯಗಳು, ಇಂಜಿನಿಯರಿಂಗ್ ಗೀತೆ ಎಂಬ ಪುಸ್ತಕ ಬರೆದಿದ್ದೇನೆ. ಇತ್ತೀಚಿಗೆ ಫೇಸ್‌ಬುಕ್‌ನಲ್ಲಿ ತಂತ್ರಜ್ಞ ತ್ರಿಪದಿ ಬರೆಯುತ್ತಿದ್ದೇನೆ ಎಂದು ಅವರು ತಿಳಿಸಿದರು.
ಈ ವೇಳೆ ದಿ ಹಾರ್ಟ್ ಫುಲ್‌ನೆಸ್ ವೇ ಪುಸ್ತಕ ಬಿಡುಗಡೆ ಮಾಡಲಾಯಿತು. ಕಸಾಪ ಅಧ್ಯಕ್ಷ ಮನುಬಳಿಗಾರ, ಗೌರವ ಕಾರ್ಯದರ್ಶಿಗಳಾದ ರಾಜಶೇಖರ್ ಹತಗುಂದಿ, ವ.ಚ.ಚನ್ನಗೌಡ, ಕೋಶಾಧ್ಯಕ್ಷ ವ.ಚನ್ನೇಗೌಡ ಸೇರಿ ಪ್ರಮುಖರಿದ್ದರು.







