ದ.ಕ.ಜಿಲ್ಲೆಯಲ್ಲಿ ಭಾರೀ ಗಾಳಿಮಳೆ
ಮಂಗಳೂರು, ಮೇ 26: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಶುಕ್ರವಾರ ತಡರಾತ್ರಿ ದ.ಕ.ಜಿಲ್ಲೆಯ ಮಂಗಳೂರು ಸಹಿತ ವಿವಿಧ ಕಡೆ ಬಿರುಗಾಳಿ ಸಹಿತ ಭಾರೀ ಗಾಳಿಮಳೆಯಾಗಿದೆ. ಇದರಿಂದ ನಗರದ ಚಿಲಿಂಬಿಯಲ್ಲಿ ಎರಡು ಮನೆಗೆ ಹಾನಿಯಾಗಿದೆ. ನಗರ ಮತ್ತು ಗ್ರಾಮಾಂತರ ಪ್ರದೇಶದ ಹಲವು ಕಡೆ ಕೆಲವು ಮರಗಳು ಉರುಳಿ ಬಿದ್ದಿವೆ. ರಸ್ತೆ ಪಕ್ಕದ ಹೋರ್ಡಿಂಗ್‌ಗಳು ನೆಲಕ್ಕೆ ಅಪ್ಪಳಿಸಿದ್ದು, ಸಂಚಾರಕ್ಕೂ ತೊಡಕಾಗಿವೆ.
ಕಡಲು ಪ್ರಕ್ಷುಬ್ಧ: ಶುಕ್ರವಾರ ರಾತ್ರಿಯಿಡೀ ಗುಡುಗು ಸಹಿತ ಭಾರೀ ಮಳೆಯಾಗಿದ್ದರೆ, ಶನಿವಾರ ಹಗಲಿಡೀ ಮೋಡ ಕವಿದ ವಾತಾವರಣವಿತ್ತು. ಶುಕ್ರವಾರ ರಾತ್ರಿಯ ಮಳೆಗೆ ವಿದ್ಯುತ್ ಕೈ ಕೊಟ್ಟಿದ್ದು, ಮಳೆಗಾಲದ ಆರಂಭದಲ್ಲೇ ಮೆಸ್ಕಾಂನ ಕಾರ್ಯವೈಖರಿಯ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಕಂಡು ಬಂತು.
ಶುಕ್ರವಾರ ರಾತ್ರಿಯಿಂದ ಪಣಂಬೂರು ಬೀಚ್‌ನಲ್ಲಿ ಸಮುದ್ರದ ಅಲೆಯ ಅಬ್ಬರ ಹೆಚ್ಚಾಗಿದೆ. ಬೀಚ್ ಸಮೀಪದ ಕೆಲವು ಗೂಡಂಗಡಿಗಳನ್ನು ತೆರವುಗೊಳಿಸಲಾಗಿತ್ತು. ಅದಲ್ಲದೆ ಉಳ್ಳಾಲ, ಕೋಟೆಪುರ, ಮುಕ್ಕಚೇರಿ ಮತ್ತಿತರ ಪ್ರದೇಶಗಲ್ಲಿ ಕೂಡಾ ಕಡಲು ಪ್ರಕ್ಷುಬ್ಧಗೊಂಡಿತ್ತು. ಇದರಿಂದ ಕರಾವಳಿ ತೀರದ ಜನರು ಭಯಭೀತರಾಗಿದ್ದರು.
*ಚಂಡಮಾರು ಸಾಧ್ಯತೆ: ಮುಂದಿನ 24 ಗಂಟೆಯೊಳಗೆ ರಾಜ್ಯದ ಕರಾವಳಿ ತೀರದಲ್ಲಿ ಭಾರೀ ಮಳೆಯೊಂದಿಗೆ ಚಂಡಮಾರುತ ಬೀಸುವ ಸಾಧ್ಯತೆ ಇದೆ. ಅಲ್ಲದೆ ಗಂಟೆಗೆ 90ರಿಂದ 100 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಶಾಸಕ ವೇದವ್ಯಾಸ ಕಾಮತ್ ಭೇಟಿ
ನಗರದ ಚಿಲಿಂಬಿಗುಡ್ಡೆಯಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಗೆ ಎರಡು ಮನೆಗಳಿಗೆ ಭಾಗಶ: ಹಾನಿಯಾಗಿದೆ. ವಿಧಾನಸಭಾ ಅಧಿವೇಶನದಲ್ಲಿದ್ದ ಶಾಸಕ ಡಿ ವೇದವ್ಯಾಸ ಕಾಮತ್ ಬೆಂಗಳೂರಿನಿಂದ ಶನಿವಾರ ಬೆಳಗ್ಗೆ ಮಂಗಳೂರಿಗೆ ಆಗಮಿಸಿ ಚಿಲಿಂಬಿ ಗುಡ್ಡೆ ಪರಿಸರಕ್ಕೆ ಭೇಟಿ ನೀಡಿದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು ಲೀಲಾ ಹಾಗೂ ಗಂಗಾಧರ ಅವರ ಮನೆಗಳಿಗೆ ಆಗಿರುವ ಹಾನಿಯ ಬಗ್ಗೆ ಮಂಗಳೂರು ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರ್ ಬಳಿ ಕ್ರಮಕ್ಕೆ ಸೂಚಿಸಿದ್ದೇನೆ. ಮನಪಾ ಮೂಲಕವೂ ಪರಿಹಾರ ಕೊಡಲು ಸಂಬಂಧಪಟ್ಟವರೊಂದಿಗೆ ಮಾತನಾಡಿರುವುದಾಗಿ ತಿಳಿಸಿದರು.
ಈ ಸಂದರ್ಭ ಪಾಲಿಕೆಯ ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ, ಕಾರ್ಪೊರೇಟರ್ ರಜನೀಶ್ ಕಾಪಿಕಾಡ್, ವಿನಯನೇತ್ರ ಸಹಿತ ಸ್ಥಳೀಯರು ಉಪಸ್ಥಿತರಿದ್ದರು.
ಅಪಾಯಕಾರಿ ಆವರಣ ಗೋಡೆ
ನಗರದ ಕಂಕನಾಡಿಯ ಖಾಸಗಿ ಆಸ್ಪತ್ರೆಯ ಆವರಣ ಗೋಡೆಯು ಅಪಾಯಕಾರಿಯಾಗಿದೆ. ಈ ಆವರಣ ಗೋಡೆಯ ಪಕ್ಕದಲ್ಲೇ ಕಾಲು ದಾರಿಯಿದೆ. ರಿಕ್ಷಾ ಪಾರ್ಕ್ ಇದೆ. ಮೊಬೈಲ್ ಕ್ಯಾಂಟೀನ್ ಸಹಿತ ಸಣ್ಣಪುಟ್ಟ ಗೂಡಂಗಡಿಗಳೂ ಇವೆ. ಇಲ್ಲಿ ಮುಂಜಾನೆ 5 ಗಂಟೆಯಿಂದ ರಾತ್ರಿ 1 ಗಂಟೆಯವರೆಗೂ ಸದಾ ಜನರು ನಡೆದಾಡುತ್ತಿದ್ದಾರೆ.
ರಸ್ತೆ ಅಭಿವೃದ್ಧಿಗೊಳಿಸುವ ಸಂದರ್ಭ ಆಸ್ಪತ್ರೆಯ ಆವರಣ ಗೋಡೆಯವರೆಗೂ ಮಣ್ಣನ್ನು ತೆಗೆಯಲಾಗಿದೆ. ಇದೀಗ ಮಳೆ ಸುರಿಯುವುದರೊಂದಿಗೆ ಮಣ್ಣು ಜರಿಯುತ್ತಿದೆ. ಅತ್ತ ಆಸ್ಪತ್ರೆಯ ಆವರಣ ಗೋಡೆಯೊಳಗೆ ಅಲ್ಲಲ್ಲಿ ಮಳೆ ನೀರು ಕೂಡ ನಿಲ್ಲುತ್ತಿದ್ದು, ಇದು ಅಪಾಯವನ್ನು ಆಹ್ವಾನಿಸುತ್ತಿದೆ. ಅವರಣ ಗೋಡೆ ಕುಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ಮಳೆಗಾಲಕ್ಕೆ ಮುನ್ನ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕಿದೆ.







