ರಾಜಸ್ವ ದುರುಪಯೋಗ ಆರೋಪ: ಉಪ ನೋಂದಣಾಧಿಕಾರಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು
ಬೆಂಗಳೂರು, ಮೇ 26: ಜಿಗಣಿ ಉಪನೋಂದಣಿ ಕಚೇರಿಯಲ್ಲಿ ಸಂಗ್ರಹವಾದ ಸರಕಾರದ ರಾಜಸ್ವವನ್ನು ಸರಕಾರದ ಖಾತೆಗೆ ಜಮೆ ಮಾಡದೆ ದುರುಪಯೋಗಪಡಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಉಪನೋಂದಣಾಧಿಕಾರಿ, ಪ್ರಥಮ ದರ್ಜೆ ಸಹಾಯಕ ಮತ್ತು ದ್ವಿತೀಯ ದರ್ಜೆ ಸಹಾಯಕರನ್ನು ಅಮಾನತ್ತಿನಲ್ಲಿಟ್ಟು, ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.
ನೋಂದಣಿ ಉಪ ಮಹಾಪರಿವೀಕ್ಷಕ(ಗುಪ್ತದಳ)ರ ನೇತೃತ್ವದಲ್ಲಿ ಜಿಗಣಿ ಉಪ ನೋಂದಣಿ ಕಚೇರಿಯಲ್ಲಿ ತಪಾಸಣೆ ನಡೆಸಿದಾಗ 4.58 ಕೋಟಿ ರೂ.ಗಳಷ್ಟು ಸಂಗ್ರಹವಾದ ರಾಜಸ್ವವನ್ನು ಸರಕಾರದ ಖಾತೆ ಜಮೆ ಮಾಡಿಲ್ಲದಿರುವುದು ಮತ್ತು 1.10 ಕೋಟಿ ರೂ.ಗಳಷ್ಟು ಸಂಗ್ರಹವಾದ ರಾಜಸ್ವವನ್ನು ಸಂಗ್ರಹಿಸಿದ ಮರುದಿನ ಖಜಾನೆ, ಬ್ಯಾಂಕಿಗೆ ಜಮೆ ಮಾಡದೆ, ವಿಳಂಬವಾಗಿ ಖಜಾನೆ, ಬ್ಯಾಂಕಿಗೆ ಜಮೆ ಮಾಡುವುದರ ಮೂಲಕ ಸರಕಾರದ ಹಣವನ್ನು ದುರುಪಯೋಗ ಪಡಿಸಿಕೊಂಡಿ ರುವುದಾಗಿ ಮೇ 23ರ ವರದಿಯಲ್ಲಿ ತಿಳಿಸಿದ್ದಾರೆ.
ಉಪನೋಂದಣಾಧಿಕಾರಿ ಎಂ.ಶ್ರೀನಿವಾಸ್, ಪ್ರಥಮ ದರ್ಜೆ ಸಹಾಯಕ ಪಿ.ವೇಣುಗೋಪಾಲ್, ದ್ವಿತೀಯ ದರ್ಜೆ ಸಹಾಯಕ ಕೆ.ಟಿ.ಶ್ರೀನಿವಾಸಮೂರ್ತಿ ಈ ಅವಧಿಯಲ್ಲಿ ಉಪ ನೋಂದಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಸರಕಾರದ ಹಣವನ್ನು ಖಜಾನೆಗೆ ಹಾಗೂ ಬ್ಯಾಂಕಿಗೆ ಜಮೆ ಮಾಡದೆ, ಸರಕಾರದ ಹಣವನ್ನು ದುರುಪಯೋಗಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ, ಇವರನ್ನು ಮೇ 25ರಂದು ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ, ಅಮಾನತ್ತಿನಲ್ಲಿಡಲಾಗಿದೆ ಹಾಗೂ ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಬಸವನಗುಡಿಯಲ್ಲಿರುವ ಜಿಲ್ಲಾ ನೋಂದಣಾಧಿಕಾರಿಗೆ ನಿರ್ದೇಶನ ನೀಡಲಾಗಿದೆ. ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಪ್ರಕಟನೆ ತಿಳಿಸಿದೆ.







