ವಿವಾಹಿತೆಯೊಂದಿಗಿನ 'ಫೇಸ್‍ಬುಕ್' ಸ್ನೇಹ ಯುವಕನ ಕೊಲೆಯಲ್ಲಿ ಅಂತ್ಯ: ಮೂವರ ಬಂಧನ

ಶಿವಮೊಗ್ಗ, ಮೇ 25: ಸಾಮಾಜಿಕ ಜಾಲತಾಣ 'ಫೇಸ್‍ಬುಕ್' ಮೂಲಕವಾದ ವಿವಾಹಿತೆಯ ಜೊತೆಗಿನ ಪರಿಚಯ ಯುವಕನ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿ ನಡೆದಿದೆ. ಹತ್ಯೆ ಆರೋಪದ ಮೇರೆಗೆ ವಿವಾಹಿತೆಯ ಪತಿ ಸೇರಿದಂತೆ ಆತನ ಇಬ್ಬರು ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ಕಿರಾಣಿ ಅಂಗಡಿ ವ್ಯಾಪಾರದ ಜೊತೆಗೆ ಕೇಬಲ್ ಆಪರೇಟರ್ ಆಗಿದ್ದ ಸಂಜೀವ್‍ಕುಮಾರ್ (24) ಕೊಲೆಗೀಡಾದ ಯುವಕ ಎಂದು ಗುರುತಿಸಲಾಗಿದೆ. ಹತ್ಯೆ ನಡೆಸಿದ ಆರೋಪದ ಮೇರೆಗೆ ವಿವಾಹಿತ ಮಹಿಳೆಯ ಪತಿ, ಶಿಕಾರಿಪುರ ಪಟ್ಟಣದ ಚೆನ್ನಕೇಶವ ನಗರದ ನಿವಾಸಿ ಹರೀಶ್‍ಬಾಬು (43) ಹಾಗೂ ಆತನ ಸ್ನೇಹಿತರದಾದ ಅಂಬೇಡ್ಕರ್ ನಗರದ ನಿವಾಸಿ ನರಸಿಂಹಸ್ವಾಮಿ (44) ಮತ್ತು ನಿಸರ್ಗ ಪ್ರಿಂಟರ್ ಮಾಲಿಕ ಸುರೇಶ್ (43) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಜಿಲ್ಲಾ ರಕ್ಷಣಾಧಿಕಾರಿ ಮಾರ್ಗದರ್ಶನದಲ್ಲಿ ಎಎಸ್‍ಪಿ ಮುತ್ತುರಾಜ್, ಡಿವೈಎಸ್‍ಪಿ ಸುಧಾಕರನಾಯ್ಕ್, ಸರ್ಕಲ್ ಇನ್ಸ್ ಪೆಕ್ಟರ್ ಬಸವರಾಜ್, ಸಬ್ ಇನ್ಸ್ ಪೆಕ್ಟರ್ ಆಂಜನೇಯ ನೇತೃತ್ವದ ಪೊಲೀಸ್ ತಂಡ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದೆ. ಈ ಸಂಬಂಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ: ಕೊಲೆಗೀಡಾದ ಸಂಜೀವ್ ಕುಮಾರ್ ಗೆ ಆರೋಪಿ ಹರೀಶ್‍ಬಾಬು ಪತ್ನಿಯ ಪರಿಚಯ ಫೇಸ್‍ಬುಕ್ ಮೂಲಕವಾಗಿತ್ತು. ಇದು ಇಬ್ಬರ ನಡುವೆ ಅನೈತಿಕ ಸಂಬಂಧದವರೆಗೂ ತಲುಪಿತ್ತು ಎನ್ನಲಾಗಿದ್ದು,. ಈ ವಿಷಯ ಅರಿತ ಹರೀಶ್‍ಬಾಬು, ಹಲವು ಬಾರಿ ಸಂಜೀವ್‍ಕುಮಾರ್ ಗೆ ಎಚ್ಚರಿಕೆ ನೀಡಿದ್ದ ಎನ್ನಲಾಗಿದೆ.
ಇದರ ಹೊರತಾಗಿಯೂ ಯುವಕ ಸಂಜೀವ್ ಕುಮಾರ್ ಆರೋಪಿ ಪತ್ನಿಯ ಜೊತೆಗಿನ ಸಂಬಂಧ ಮುಂದುವರಿಸಿದ್ದ. ಇದರಿಂದ ಆಕ್ರೋಶಗೊಂಡಿದ್ದ ಆರೋಪಿಯು ಯುವಕನ ಹತ್ಯೆಗೆ ನಿರ್ಧರಿಸಿ, ಮೇ 6 ರಂದು ತನ್ನಿಬ್ಬರು ಸ್ನೇಹಿತರ ಜೊತೆಗೂಡಿ ಶಿಕಾರಿಪುರ ಪಟ್ಟಣಕ್ಕೆ ಆಗಮಿಸಿದ್ದ ಯುವಕನ್ನು ಅಪಹರಿಸಿದ್ದ.
ಹರೀಶ್‍ಬಾಬು ಒಡೆತನದ ಬಳೂರು ಗ್ರಾಮದ ಬಳಿಯಿದ್ದ ಜಲ್ಲಿಕ್ರಷರ್ ಬಳಿ ಯುವಕನನ್ನು ಆರೋಪಿಗಳು ಕರೆತಂದಿದ್ದು, ಆರೋಪಿಗಳೆಲ್ಲರೂ ಸೇರಿ ಕಟ್ಟಿಗೆ ಹಾಗೂ ಕಬ್ಬಿಣದ ರಾಡ್‍ನಿಂದ ಥಳಿಸಿದ್ದಾರೆ. ಇದರಿಂದಾಗಿ ಸ್ಥಳದಲ್ಲಿಯೇ ಯುವಕ ಮೃತಪಟ್ಟಿದ್ದ. ನಂತರ ಜಲ್ಲಿ ಕ್ರಷರ್ ಸಮೀಪವೇ ಜೆಸಿಬಿ ಮೂಲಕ ಗುಂಡಿ ತೆಗೆದು ಶವ ಮುಚ್ಚಿ ಹಾಕಿದ್ದರು ಎಂದು ತಿಳಿದು ಬಂದಿದೆ.
ನಂತರ ಆರೋಪಿಗಳು ಆರಾಮಗಾಗಿ ಓಡಾಡಿಕೊಂಡಿದ್ದರು. ಈ ನಡುವೆ ಕೊಲೆಗೀಡಾದ ಯುವಕನ ತಂದೆ ದೇವೇಂದ್ರಪ್ಪರವರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪುತ್ರ ನಾಪತ್ತೆಯಾಗಿರುವ ದೂರು ದಾಖಲಿಸಿದ್ದರು. ಮೇ 14 ರಂದು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ನಡೆಸಿದಾಗ ಯುವಕ ಕೊಲೆಗೀಡಾಗಿರುವ ವಿಷಯ ಗೊತ್ತಾಗಿದೆ. ಮೇ 24 ರಂದು ಮೂವರು ಆರೋಪಿಗಳನ್ನು ಬಂಧಿಸಿದ್ದು, ಜೊತೆಗೆ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೊಳಪಡಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.







