ಇನ್ನು ಆರು ತಿಂಗಳಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದು ಖಚಿತ: ಶಾಸಕ ಎಲ್.ನಾಗೇಂದ್ರ

ಮೈಸೂರು,ಮೇ.26: ಇನ್ನು ಆರು ತಿಂಗಳ ಬಳಿಕ ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದು ಖಚಿತ ಎಂದು ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ಎಲ್.ನಾಗೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರಿನ ವಿಜಯನಗರದಲ್ಲಿರುವ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ನೂತನ ಶಾಸಕ ಎಲ್.ನಾಗೇಂದ್ರ ಅವರಿಗೆ ಶನಿವಾರ ಅಭಿನಂದನಾ ಸಮಾರಂಭ ಮತ್ತು ಕಾರ್ಯಕರ್ತರ ಕೃತಜ್ಞತಾ ಸಮಾರಂಭದಲ್ಲಿ ಪಾಲ್ಗೊಂಡು ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ನನ್ನನ್ನು 15 ಸಾವಿರ ಮತಗಳ ಅಂತರದಲ್ಲಿ 52ಸಾವಿರ ಮತಗಳನ್ನು ನೀಡಿ ಗೆಲ್ಲಿಸಿದ ಎಲ್ಲರಿಗೂ ಅಭಿನಂದನೆ. ನಾನು ರಾಜಕೀಯಕ್ಕೆ ಬಂದು 25 ವರ್ಷಗಳಾಯಿತು. 26ನೇ ವರ್ಷಕ್ಕೆ ಕಾಲಿರಿಸಿದ ಸಂದರ್ಭದಲ್ಲಿ ಶಾಸಕನಾಗಿದ್ದೇನೆ. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳಿಂದ ನನಗೆ ಕ್ಷೇತ್ರದ ಸೇವಕನಾಗಿ ಕೆಲಸ ಮಾಡಲು ಮತ್ತೊಮ್ಮೆ ಅವಕಾಶ ಮಾಡಿಕೊಟ್ಟಿದ್ದಾರೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಮುಗಿದಿದೆ. 104 ಮಂದಿ ಶಾಸಕರಾಗಿದ್ದೇವೆ. ಆದರೂ ಅಧಿಕಾರ ನಮಗೆ ಸಿಕ್ಕಿಲ್ಲ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಬೇಕಿತ್ತು. ಆದರೆ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಆರೋಪಿಸಿದರು.
ರಾಜ್ಯದ ಜನತೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುವ ನಿರೀಕ್ಷೆಯಲ್ಲಿದ್ದರು. ಇನ್ನು ಆರು ತಿಂಗಳಲ್ಲಿ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಲಿದ್ದಾರೆ. ಇದು ನೂರಕ್ಕೆ ನೂರರಷ್ಟು ಸತ್ಯ ಎಂದರು.
ಕಾರ್ಯಕರ್ತರ ಕೆಲಸ ಇಲ್ಲಿಗೇ ನಿಂತಿಲ್ಲ. ಇನ್ನು ಪಾಲಿಕೆ ಚುನಾವಣೆ, ಪರಿಷತ್ ಚುನಾವಣೆ ಮುಂದಿನ ವರ್ಷ ಲೋಕಸಭಾ ಚುನಾವಣೆಗಳು ನಡೆಯಲಿದ್ದು, ಬಿಜೆಪಿ ಇದೇ ತರ ಗೆಲುವು ಸಾಧಿಸಬೇಕು. ಮತ್ತೊಮ್ಮೆ ಪ್ರಧಾನಿ ಮೋದಿಯವರು ಪ್ರಧಾನಿಯಾಗಿ ಆಯ್ಕೆಯಾಗಬೇಕು. ಸಂಸದ ಪ್ರತಾಪ್ ಸಿಂಹ ಅವರು ಕಾರ್ಯಕ್ರಮವನ್ನು ರೂಪಿಸಿದ್ದಾರೆ. 7428ಕೋ.ರೂ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಅಷ್ಟಪಥ ಯೋಜನೆಯನ್ನು ತಂದಿದ್ದಾರೆ. ಮೈಸೂರು-ಬೆಂಗಳೂರು ರಸ್ತೆಯನ್ನು ಅಭಿವೃದ್ಧಿ ಪಡಿಸಿದ್ದಾರೆ. ಮೈಸೂರಿನಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರ ಸ್ಥಾಪಿಸಲಾಗಿದೆ. ಕುಡಿಯುವ ನೀರಿನ ಯೋಜನೆಯನ್ನೂ ಜಾರಿಗೆ ತಂದಿದ್ದಾರೆ ಎಂದರು.
ಇದೇ ವೇಳೆ ವಿಧಾನ ಪರಿಷತ್ ಅಭ್ಯರ್ಥಿ ನಿರಂಜನ್ ಮೂರ್ತಿ ಅವರಿಗೂ ನನಗೆ ನೀಡಿದ ಸಹಕಾರವನ್ನೇ ನೀಡಿ ಎಂದರು. ನಿಮ್ಮೆಲ್ಲರ ಸಹಕಾರದಿಂದ ಗೆಲುವು ಸಾಧಿಸಿದ್ದು, ನಿಮ್ಮ ಋಣ ನನ್ನ ಮೇಲಿದೆ. ಕೊನೆಯ ಉಸಿರಿರುವರೆಗೂ ನಿಮ್ಮ ಸೇವೆ ಮಾಡುತ್ತೇನೆ ಎಂದು ಶಾಸಕ ಎಲ್.ನಾಗೇಂದ್ರ ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಡಾ.ಮಂಜುನಾಥ್, ಡಿ.ಮಾದೇಗೌಡ, ಸಂದೇಶಸ್ವಾಮಿ, ಮೈ.ವಿ.ರವಿಶಂಕರ್, ಶ್ರೀವತ್ಸ, ಇಳೈ ಆಳ್ವಾರ್ ಸ್ವಾಮೀಜಿ, ಮಲ್ಲಪ್ಪ ಗೌಡ, ಬಸವೇಗೌಡ, ಬಿ.ಪಿ.ಮಂಜುನಾಥ್, ತೋಂಟದಾರ್ಯ, ಹೇಮಂತ್ ಕುಮಾರ್ ಗೌಡ, ಎಮ್ ಶಿವಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







