ಮಾಜಿ ಶಾಸಕ ಎಚ್.ಗಂಗಾಧರನ್ ನಿಧನ

ಮೈಸೂರು,ಮೇ.26: ಕೃಷ್ಣರಾಜ ಕ್ಷೇತ್ರದ ಮಾಜಿ ಶಾಸಕ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಗಂಗಾಧರನ್ ಇಂದು ಬೆಳಿಗ್ಗೆ ನಿಧನರಾದರು.
ಇವರು ಜೆ.ಎಸ್.ಎಸ್ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ವಯೋಸಹಜ ರೋಗಗಳಿಂದ ಬಳಲುತ್ತಿದ್ದ ಇವರು ಇಂದು ಬೆಳಿಗ್ಗೆ ಜೆ ಎಸ್ ಎಸ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಸಿಂಡಿಸಿಗೆರೆ ಗ್ರಾಮದ ಪಟೇಲ್ ರುದ್ರಪ್ಪ ಮತ್ತು ನಂಜಮ್ಮ ದಂಪತಿಗಳ ಪುತ್ರನಾಗಿ 28-07-1926 ರಂದು ಜನಿಸಿದರು. ಗುಬ್ಬಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಹೆಚ್ಚಿನ ವಿಧ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದ ಇವರು ಸುತ್ತೂರು ಮಠದ ಅಂದಿನ ಶ್ರೀಗಳಾದ ಶಿವರಾತ್ರಿ ರಾಜೇಂದ್ರ ಸ್ವಾಮಿಗಳ ಸಂಪರ್ಕದೊಂದಿಗೆ ಇಲ್ಲಿಯೇ ನೆಲೆಸಿದರು.
ಮೈಸೂರಿನಲ್ಲೇ ವಕೀಲಿ ವೃತ್ತಿ ಆರಂಭಿಸಿದ ಅವರು, ಹಲವಾರು ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡಿದರು. ನಂತರ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಿಂದ 1978ರಲ್ಲಿ ಜನತಾ ಪಕ್ಷದಿಂದ ಮತ್ತು 1983ರಲ್ಲಿ ಭಾರತೀಯ ಜನಾತ ಪಕ್ಷದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಮೃತರ ಪತ್ನಿ ಇತ್ತೀಚೆಗಷ್ಟೆ ನಿಧನ ಹೊಂದಿದ್ದರು. ಇವರು ಇಬ್ಬರು ಪುತ್ರರು ಸೇರಿದಂತೆ ಅಪಾರ ಅಭಿಮಾನಿಗಳು ಬಂಧು ಬಳಗವನ್ನು ಅಗಲಿದ್ದಾರೆ.
ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದ ಅವರು ಸಮಾಜಮುಖಿ ಕೆಲಸಗಳನ್ನು ಅಂತಿಮ ದಿನಗಳವರೆಗೂ ಮುಂದುವರೆಸಿದ್ದರು. ಮೃತರ ಪಾರ್ಥಿವ ಶರೀರವನ್ನು ಅವರ ಸ್ವಗೃಹದಲ್ಲಿ ಸಂಜೆ ವರೆಗೆ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ನಂತರ ಜೆಎಸ್‍ಎಸ್ ಆಸ್ಪತ್ರೆಗೆ ಅವರ ದೇಹವನ್ನು ದಾನಮಾಡಲಾಯಿತು.
ಗಂಗಾಧರಯ್ಯ ನಿಧನಕ್ಕೆ ಸುತ್ತೂರು ಶ್ರೀಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.







