ಯಡಿಯೂರಪ್ಪ ಕ್ಷಮೆಯಾಚಿಸದಿದ್ದರೆ ಮಂಡ್ಯಕ್ಕೆ ಕಾಲಿಡಲು ಬಿಡುವುದಿಲ್ಲ: ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್
ಮಂಡ್ಯ, ಮೇ 26: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ವಿರುದ್ಧ ತೀವ್ರ ಹತಾಶೆಗೊಂಡಿರುವ ಯಡಿಯೂರಪ್ಪ ಕೊಳ್ಳಿದೆವ್ವ, ದುರ್ಯೋಧನ, ನಾಗರಹಾವು, ನಯವಂಚಕ ಎಂದೆಲ್ಲಾ ಜರಿದಿರುವುದು ಅವರ ಘನತೆಗೆ ತಕ್ಕುದಲ್ಲ. ಯಡಿಯೂರಪ್ಪ ಕ್ಷಮೆಯಾಚಿಸದಿದ್ದರೆ ಅವರನ್ನು ಮಂಡ್ಯ ಜಿಲ್ಲೆಗೆ ಕಾಲಿಡಲು ಬಿಡುವುದಿಲ್ಲ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಎಚ್ಚರಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಕ್ರವಾರ ವಿಶ್ವಾಸ ಮತ ಸಾಬೀತುಪಡಿಸುವ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸಭಾ ಇತಿಹಾಸದಲ್ಲಿಯೇ ಕೆಟ್ಟದಾಗಿ ನಡೆದುಕೊಂಡರು. ಅವರ ಭಾಷೆ, ನಡವಳಿಕೆ, ತೀರ ಕೆಟ್ಟದಾಗಿತ್ತು ಎಂದು ಕಿಡಿಕಾರಿದರು.
ಯಡಿಯೂರಪ್ಪ ಕುಮಾರಸ್ವಾಮಿಯವರ ವಿರುದ್ಧ ಬಳಸಿದ ಮಾತುಗಳನ್ನು ಕೇಳಿ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರು ಜಿಲ್ಲಾ ಬಂದ್ ಮಾಡಲು ನಿರ್ಧರಿಸಿದ್ದರು. ಆದರೆ, ಎಚ್.ಡಿ.ಕುಮಾರಸ್ವಾಮಿ ಬಹುಮತ ಸಾಬೀತುಪಡಿಸಿದ ಮಾರನೇ ದಿನವೇ ಬಂದ್ ಬೇಡ ಎಂದು ತೀರ್ಮಾನಿಸಿದ್ದೇವೆ. ಅಧಿವೇಶನದಲ್ಲಿ ಅಗೌರವವಾಗಿ, ಕೆಟ್ಟದಾಗಿ ನಡೆದುಕೊಂಡ ಯಡಿಯೂರಪ್ಪ ಕೂಡಲೇ ಕುಮಾರಸ್ವಾಮಿಯರ ಬಳಿ ಕ್ಷಮೆ ಕೇಳಬೇಕು ಎಂದು ಅವರು ತಾಕೀತು ಮಾಡಿದರು.
ಯಡಿಯೂರಪ್ಪ ಕೊಳ್ಳಿದೆವ್ವ: ಯಡಿಯೂರಪ್ಪನವರು ನಮ್ಮ ನಾಯಕ ಕುಮಾರಸ್ವಾಮಿಯವರನ್ನು ಕೊಳ್ಳಿದೆವ್ವದ ಬಾಯಲ್ಲಿ ಭಗವದ್ಗೀತೆ ಬರುತ್ತಿದೆ ಎಂದು ಹೇಳಿದ್ದಾರೆ. ಯಡಿಯೂರಪ್ಪನವರು ತಮಗೆ ರಾಜಕೀಯ ಸ್ಥಾನಮಾನ ನೀಡಿದ ಬಿಜೆಪಿ ಪಕ್ಷದ ವಿರುದ್ಧವೇ ಮಸಲತ್ತು ನಡೆಸಿದ್ದರು. ಕೆಜೆಪಿ ಪಕ್ಷವನ್ನು ಕಟ್ಟಿ ಬಿಜೆಪಿಯನ್ನು ನಿರ್ನಾಮ ಮಾಡುತ್ತೇವೆಂದು ರಾಜ್ಯಾದ್ಯಂತ ಸುತ್ತಿದ್ದರು. ಬಿಜೆಪಿ ಮುಗಿಸಲು ಹೊರಟ ಯಡಿಯೂರಪ್ಪನವರೇ ಕೊಳ್ಳಿದೆವ್ವ ಎಂದು ಅವರು ತಿರುಗೇಟು ನೀಡಿದರು.
ನಿನ್ನೆ ಸದನದಲ್ಲಿ ಯಡಿಯೂರಪ್ಪ ಕುಮಾರಸ್ವಾಮಿಯವರನ್ನು ದುರ್ಯೋಧನ ಎಂದು ಕರೆದಿದ್ದಾರೆ. ಯಡಿಯೂರಪ್ಪನವರು ಆಡಿದ ಮಾತುಗಳನ್ನು ಕೇಳಿದರೆ ಅವರಲ್ಲಿ ಸೇಡಿನ ಮನೋಭಾವ ಕಾಣುತ್ತಿದೆ. ದುರ್ಯೋಧನನಂತೆ ವರ್ತಿಸುತ್ತಿರುವ ಯಡಿಯೂರಪ್ಪ ಪ್ರಧಾನಮಂತ್ರಿ ನರೇಂದ್ರಮೋದಿ ದೇವೇಗೌಡರ ಬಗ್ಗೆ ಹೊಗಳಿದ್ದರೂ ಇನ್ನು ಮುಂದೆ ಅಪ್ಪ-ಮಗನ ವಿರುದ್ಧ ಹೋರಾಟ ಮಾಡುತ್ತೇನೆಂದು ಹೇಳಿದ್ದಾರೆ. ಬಿಜೆಪಿ ಪಕ್ಷವನ್ನು ಹಾಳು ಮಾಡಲು ಹೊರಟ್ಟಿದ್ದ ಯಡಿಯೂರಪ್ಪಗೆ ದೇವೇಗೌಡ-ಕುಮಾರಸ್ವಾಮಿಯವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
2006ರಲ್ಲಿ ಝಮೀರ್ ಅಹಮದ್‍ರವರ ಗೆಸ್ಟ್ ಹೌಸ್‍ಗೆ ಬಂದ ಯಡಿಯೂರಪ್ಪ ಮತ್ತು ಶೋಭಾ ಕಂರದ್ಲಾಜೆ ನಾವು ಬಿಜೆಪಿ ಪಕ್ಷದಲ್ಲಿದ್ದರೆ ಏನೂ ಆಗುವುದಿಲ್ಲ. ನನ್ನನ್ನು ಮಂತ್ರಿ ಮಾಡಿ ಸಾಕು ಎಂದು ಕುಮಾರಸ್ವಾಮಿಯವರಲ್ಲಿ ವಿನಂತಿ ಮಾಡಿದ್ದರು. ಅವರನ್ನು ಉಪಮುಖ್ಯಮಂತ್ರಿ ಮಾಡಿ ಇಷ್ಟು ಎತ್ತರಕ್ಕೆ ಬೆಳೆಸಿದ ಕುಮಾರಸ್ವಾಮಿಯವರನ್ನೇ ಬಯ್ದಿರುವ ಯಡಿಯೂರಪ್ಪನವರ ವರ್ತನೆ ನಾಚಿಕೆಗೇಡು ಎಂದು ಅವರು ಲೇವಡಿ ಮಾಡಿದರು.
ಕುಮಾರಸ್ವಾಮಿಯವರ ಫೋಟೋ ಇಟ್ಟುಕೊಂಡು ಪೂಜೆ ಮಾಡಬೇಕಾದ ಯಡಿಯೂರಪ್ಪ ಜೆಡಿಎಸ್ ಪಕ್ಷ ಕೇವಲ 38 ಸ್ಥಾನ ಗೆದ್ದಿದೆ ಎಂದು ಟೀಕಿಸಿದ್ದಾರೆ. ಕೆಜೆಪಿ ಕಟ್ಟಿ ಯಡಿಯೂರಪ್ಪ ಎಷ್ಟು ಸ್ಥಾನ ಗೆದ್ದರು ಎಂಬುದು ರಾಜ್ಯಕ್ಕೆ ಗೊತ್ತಿದೆ. ನಿಮ್ಮ ಭಾಷಣ ರಾಜ್ಯದ ಆರೂವರೆ ಕೋಟಿ ಜನರು ಅಸಹ್ಯ ಪಡುವಂತೆ ಮಾಡಿದೆ. ಭಾಷಾ ಜ್ಞಾನ ಇಟ್ಟುಕೊಂಡು ಮಾತನಾಡಬೇಕು ಎಂದು ವಾಗ್ದಾಳಿ ನಡೆಸಿದರು.
ಸಾಲಮನ್ನಾ ಮಾಡುತ್ತಾರೆ: ಸಾಲ ಮಾಡುವುದಾಗಿ ಎಚ್.ಡಿ.ಕುಮಾರಸ್ವಾಮಿಯವರು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದಾರೆ. ವಿಶ್ವಾಸ ಮತ ಗೆದ್ದ ತಕ್ಷಣವೇ ಈ ಬಗ್ಗೆ ಅಧಿಕಾರಿಗಳ ಸಭೆ ಕರೆದು ಮಾಹಿತಿ ಪಡೆದಿದ್ದಾರೆ. ಯಾವ ಕಾರಣಕ್ಕೂ ಸಾಲಮನ್ನಾ ವಿಚಾರದಲ್ಲಿ ಹಿಂದೆ ಸರಿಯುವುದಿಲ್ಲ, ಮಾಡಿಯೇ ತೀರುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ನಗರಸಭೆ ಸದಸ್ಯ ಎಂ.ಜೆ.ಚಿಕ್ಕಣ್ಣ, ಮುಖಂಡರಾದ ಎಂ.ಬಿ.ಶ್ರೀನಿವಾಸ್, ಜಯರಾಂ, ಬೇಲೂರು ಶಶಿಧರ್, ಇತರರು ಉಪಸ್ಥಿತರಿದ್ದರು.







