ಉಳ್ಳಾಲ ಬ್ರಹ್ಮಶ್ರೀ ಬಿಲ್ಲವ ವೇದಿಕೆ ವತಿಯಿಂದ ವಿದ್ಯಾರ್ಥಿಗಳ ದತ್ತು ಸ್ವೀಕಾರ ಸಮಾರಂಭ

ಉಳ್ಳಾಲ, ಮೇ 27: ಸಮಾಜದ ಕಟ್ಟಕಡೆಯ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿರುವ ಸಮಯದಲ್ಲಿ ಉಳ್ಳಾಲದ ಬ್ರಹ್ಮಶ್ರೀ ಬಿಲ್ಲವ ವೇದಿಕೆ ದತ್ತು ಸ್ವೀಕಾರದಂತಹ ಮಹತ್ಕಾರ್ಯ ನಡೆಸುತ್ತಿರುವ ಕಾರ್ಯ ಎಲ್ಲರಿಗೂ ಮಾದರಿ ಎಂದು ಅಖಿಲ ಭಾರತ ಬಿಲ್ಲವರ ಯೂನಿಯನ್ ಇದರ ಅಧ್ಯಕ್ಷ ನವೀನ್ ಚಂದ್ರ ಸುವರ್ಣ ಅಭಿಪ್ರಾಯಪಟ್ಟರು.
ಅವರು ಉಳ್ಳಾಲ ಬ್ರಹ್ಮಶ್ರೀ ಬಿಲ್ಲವ ವೇದಿಕೆ ಇದರ ಆಶ್ರಯದಲ್ಲಿ ಕೊಲ್ಯ ಸೌಭಾಗ್ಯ ಸದನದಲ್ಲಿ ರವಿವಾರ ಜರಗಿದ 16 ನೇ ವರ್ಷದ ಶೈಕ್ಷಣಿಕ ದತ್ತು ಸ್ವೀಕಾರ ಹಾಗೂ ಬ್ರಹ್ಮಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ 40 ವಿದ್ಯಾರ್ಥಿಗಳ ದತ್ತು ಸ್ವೀಕಾರ, 28 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, 10 ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಆರ್ಥಿಕ ನೆರವು ಮತ್ತು 100 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ನಡೆಸಿ ಮಾತನಾಡಿದರು.
ಶೈಕ್ಷಣಿಕ ದತ್ತು ಸ್ವೀಕಾರದ ಮೂಲಕ ವಿದ್ಯಾರ್ಥಿಗಳಲ್ಲಿ ಶಕ್ತಿ, ಉತ್ಸಾಹ ನೀಡಿ ಶಿಕ್ಷಣಕ್ಕೆ ಪ್ರೋತ್ಸಾಹಿಸುವಂತಾಗುತ್ತದೆ. ಆರ್ಥಿಕ ಮುಗ್ಗಟ್ಟಿನಿಂದ ಹಲವರ ಶಿಕ್ಷಣ ಮೊಟಕು ಆಗುವ ಸಂದರ್ಭವಿತ್ತು. ಸಂಘಟನೆಗಳಿಂದ ದೊರೆಯುವ ಸಹಕಾರವನ್ನು ಪಡೆಯುವ ವಿದ್ಯಾರ್ಥಿಗಳು ಗುರಿ ಮತ್ತು ಪ್ರಯತ್ನವನ್ನು ಇಟ್ಟುಕೊಂಡು, ಪ್ರಾಮಾಣಿಕ ಪ್ರಯತ್ನದ ಮೂಲಕ ಶಿಕ್ಷಣ ಪಡೆದು ಜೀವನದಲ್ಲಿ ಯಶಸ್ವಿಯಾಗಬೇಕಿದೆ. ಬಿಲ್ಲವ ಯುವಕರು ಅಪರಾಧ ಚಟುವಟಿಕೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಿಂದ ಸಮಾಜಕ್ಕೆ ಶೋಷಣೆಯಾಗುತ್ತಿದೆ. ಮುಂದೆ ಸಮಾಜಕ್ಕೆ ಶೋಷಣೆಯಾಗದ ರೀತಿಯಲ್ಲಿ ಬಾಳಿ ಸಂಘಟನೆಗಳ ಮೂಲಕ ಎಲ್ಲರೂ ಬಲಿಷ್ಠರಾಗಬೇಕಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಮೂತ್ರರೋಗ ತಜ್ಞ ಡಾ ಸದಾನಂದ ಪೂಜಾರಿ ಮಾತನಾಡಿ ಸಮುದಾಯದವರು ಶೈಕ್ಷಣಿಕವಾಗಿ ಅಭಿವೃದ್ಧಿ ಜತೆಗೆ ಸ್ಥಾನಮಾನ ಸಿಗುವುದರ ಮೂಲಕ ಹಿಂದೆ ತಾರತಮ್ಯ ತೋರಿಸಿದವರು ಗೌರವಿಸುವಂತಾಗಿದೆ. ಸಮಾಜದಲ್ಲಿ ಕೆಎಎಸ್ ಮತ್ತು ಐಎಎಸ್ ಅಧಿಕಾರಿಗಳ ಸಂಖ್ಯೆ ಕಡಿಮೆಯಿದೆ. ವಿದ್ಯಾರ್ಥಿಗಳಲ್ಲಿ ಅಂತಹ ಪರೀಕ್ಷೆಯನ್ನು ಎದುರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕಿದೆ. ಸಂಘಗಳು ಮಾಡುವ ಸಹಾಯವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿ ಸಮಾಜಮುಖಿಯಾಗಿ ಬೆಳೆಯಬೇಕಿದೆ. ಬೆಂಗಳೂರಿನ ಬನ್ನೇರುಘಟ್ಟ, ಶೇಷಾದ್ರಿಪುರಂ ನಲ್ಲಿ ಇಂಜಿನಿಯರಿಂಗ್, ವೈದ್ಯಕೀಯ ಹಾಗೂ ಸ್ನಾತಕೋತ್ತರ ಪದವಿ ಪಡೆಯುವ ವಿದ್ಯಾರ್ಥಿಗಳಿಗೆ ವಿವಿಧ ಸವಲತ್ತುಗಳನ್ನು ಕಲ್ಪಿಸಲಾಗಿದೆ. ಸಮುದಾಯದ ವಿದ್ಯಾರ್ಥಿಗಳು ಅದನ್ನು ಸದುಪಯೋಗಪಡಿಸಬೇಕಿದೆ ಎಂದರು.
ಬಿಲ್ಲವ ಸಮಾಜದಲ್ಲಿ ಸಂಘಟನೆಗಳು ಹಲವು ಇವೆ. ಆದರೂ ಸಮಾಜದ ಮಂದಿ ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಹಿಂದೆ ಇದ್ದಾರೆ. ಒಳಜಗಳವನ್ನು ಬಿಟ್ಟು ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಮುದಾಯದ ಅಸ್ತಿತ್ವವನ್ನು ಎತ್ತಿಹಿಡಿಯುವ ಕಾರ್ಯ ಆಗಬೇಕಿದೆ. ದೈವಸ್ಥಾನಗಳಲ್ಲಿ ಪೂಜಾರಿ ವರ್ಗದವರೇ ಇಲ್ಲದಂತಹ ವಾತಾವರಣ ನಿರ್ಮಾಣ ಆಗಿದೆ. ಇದರಿಂದ ದೈವದ ಸೇವೆಯೂ ಸರಿಯಾಗಿ ಆಗುತ್ತಿಲ್ಲ. ಈ ನಿಟ್ಟಿನಲ್ಲಿ ದೈವದ ಸೇವಾ ಕಾರ್ಯ ನಡೆಸುವವರ ಅಧ್ಯಯನ ನಡೆಸಿ ಸರಕಾರ ಅವರನ್ನು ಗುರುತಿಸುವಂತೆ ಮಾಡಬೇಕಿದೆ. ಮಾಸಿಕ ವೇತನ, ಇಎಸ್ ಐ ಸೌಲಭ್ಯವನ್ನು ಒದಗಿಸಲು ಚಿಂತನೆ ನಡೆಸಬೇಕಿದೆ ಎಂದರು.
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್ ಮಾತನಾಡಿ ಬಿಲ್ಲವ ಸಮಾಜದಲ್ಲಿ ಸಂಘಟನೆಗಳು ಹಲವು ಇವೆ. ಆದರೂ ಸಮಾಜದ ಮಂದಿ ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಹಿಂದೆ ಇದ್ದಾರೆ. ಒಳಜಗಳವನ್ನು ಬಿಟ್ಟು ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಮುದಾಯದ ಅಸ್ತಿತ್ವವನ್ನು ಎತ್ತಿಹಿಡಿಯುವ ಕಾರ್ಯ ಆಗಬೇಕಿದೆ. ದೈವಸ್ಥಾನಗಳಲ್ಲಿ ಪೂಜಾರಿ ವರ್ಗದವರೇ ಇಲ್ಲದಂತಹ ವಾತಾವರಣ ನಿರ್ಮಾಣ ಆಗಿದೆ. ಇದರಿಂದ ದೈವದ ಸೇವೆಯೂ ಸರಿಯಾಗಿ ಆಗುತ್ತಿಲ್ಲ. ಈ ನಿಟ್ಟಿನಲ್ಲಿ ದೈವದ ಸೇವಾ ಕಾರ್ಯ ನಡೆಸುವವರ ಅಧ್ಯಯನ ನಡೆಸಿ ಸರಕಾರ ಅವರನ್ನು ಗುರುತಿಸುವಂತೆ ಮಾಡಬೇಕಿದೆ. ಮಾಸಿಕ ವೇತನ, ಇಎಸ್ ಐ ಸೌಲಭ್ಯವನ್ನು ಒದಗಿಸಲು ಚಿಂತನೆ ನಡೆಸಬೇಕಿದೆ ಎಂದರು.
ಉಳ್ಳಾಲ ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಅಧ್ಯಕ್ಷ ಕೆ.ಟಿ.ಸುವರ್ಣ ಮಾತನಾಡಿ ಉಳ್ಳಾಲ ಬ್ರಹ್ಮಶ್ರೀ ಬಿಲ್ಲವ ವೇದಿಕೆ ಕಳೆದ 16 ವರ್ಷಗಳಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಮುಂದೆ ಬರಲು ಪ್ರೋತ್ಸಾಹ ನೀಡುತ್ತಾ ಬಂದಿದೆ. ಸಂಘದ ಸದಸ್ಯರ ಹಾಗೂ ಹಿತೈಷಿಗಳ ಶ್ರಮದಿಂದ ಸಾಧ್ಯವಾಗಿದೆ ಎಂದರು.
ಅಖಿಲ ಭಾರತ ಮಹಿಳಾ ಬಿಲ್ಲವ ಯೂನಿಯನ್ ಅಧ್ಯಕ್ಷೆ ಸುಮಲತಾ .ಎನ್.ಸುವರ್ಣ , ದುಬೈ ಬಿಲ್ಲವಾಸ್ ಇದರ ಮಾಧವ ಪೂಜಾರಿ, ತೊಕ್ಕೊಟ್ಟು ಕಾಪಿಕಾಡಿನ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಎ.ಜೆ.ಶೇಖರ್, ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಹಿತ್ಲು ಉಳ್ಳಾಲ ವಲಯದ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಕಿನ್ಯಾ ಭಂಡಾರಮನೆ ಶ್ರೀ ಮಲರಾಯ ಧೂಮಾವತಿ ಬಂಟ ದೈವಸ್ಥಾನದ ಆಡಳಿತ ಮೊಕ್ತೇಸರ ಬಾಬು ಕಿನ್ಯಾ, ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ, ಉದ್ಯಮಿ ಬಿಲ್ಲವ ಡಿ.ಗೋಪಾಲ್, ಕಾರ್ಯಾಧ್ಯಕ್ಷ ಸತೀಶ್ ಕರ್ಕೇರ, ಮುಖ್ಯ ಅತಿಥಿಗಳಾಗಿದ್ದರು. ಲಕ್ಷ್ಮಣ ಪೂಜಾರಿ ಉಪಸ್ಥಿತರಿದ್ದರು. ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದ ಖ್ಯಾತ ಯುವ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಇವರಿಗೆ ಬ್ರಹ್ಮಶ್ರೀ ಪ್ರಶಸ್ತಿ ಪ್ರದಾನಿಸಲಾಯಿತು.
ದತ್ತು ಸಂಚಾಲಕ ಆನಂದ ಅಸೈಗೋಳಿ ವಿದ್ಯಾರ್ಥಿಗಳ ವಿವರ ನೀಡಿದರು. ಪ್ರಧಾನ ಕಾರ್ಯದರ್ಶಿ ಜೀವನ್ ಕುಮಾರ್ ತೊಕ್ಕೊಟ್ಟು ಸ್ವಾಗತಿಸಿದರು. ಪ್ರವೀಣ್.ಯಸ್ ಕುಂಪಲ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಹರೀಶ್ ಮುಂಡೋಳಿ ವಂದಿಸಿದರು. ಹೊಸನಗರ ಮೇಳದ ಖ್ಯಾತ ಭಾಗವತರು ರವಿಚಂದ್ರ ಕನ್ನಡಿಕಟ್ಟೆ ಇವರಿಗೆ ಬ್ರಹ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.







